ಬೆಂಗಳೂರು :ಶಾಲಿನಿ ರಜನೀಶ್ ರಾಜ್ಯದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ರಾಜ್ಯದ ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಪತಿಯ ನಂತರ ಪತ್ನಿ ವಹಿಸಿಕೊಂಡವರಲ್ಲಿ ಶಾಲಿನಿ ರಜನೀಶ್ ಎರಡನೇಯವರಾಗಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಶಾಲಿನಿ ರಜನೀಶ್ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ. ಜುಲೈ 31ಕ್ಕೆ ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಇದೀಗ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ಪತ್ನಿ ಶಾಲಿನಿ ರಜನೀಶ್ ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಶಾಲಿನಿ ರಜನೀಶ್ ಸದ್ಯ ಅಭಿವೃದ್ಧಿ ಆಯುಕ್ತೆ ಆಗಿದ್ದಾರೆ. ಜೊತೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ರಾಜ್ಯದ ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಪತಿಯ ನಂತರ ಪತ್ನಿ ವಹಿಸಿಕೊಳ್ಳುವುದು ಎರಡನೇ ಬಾರಿ ಆಗಲಿದೆ. 2000ರ ಡಿಸೆಂಬರ್‌ನಲ್ಲಿ ಬಿ. ಕೆ ಭಟ್ಟಾಚಾರ್ಯ ಅವರ ನಂತರ ಅವರ ಪತ್ನಿ ಥೆರೇಸಾ ಭಟ್ಟಾಚಾರ್ಯ ಅವರು ಸಿಎಸ್ ಆಗಿದ್ದರು.