ಬೆಂಗಳೂರು:ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ದೇಶಾದ್ಯಂತ ಜನನ, ಮರಣ ನೋಂದಣಿ ಅಧಿನಿಯಮ, 1969 ಜಾರಿಯಲ್ಲಿದೆ. ಕರ್ನಾಟಕ ಜನನ, ಮರಣಗಳ ನೋಂದಣಿ ನಿಯಮಗಳು, 1999ರ ಮೂಲಕ ಪುನರ್‌ರಚಿತ ನಾಗರಿಕ ನೋಂದಣಿ ಪದ್ಧತಿಯನ್ನು 01-01-2000ರಿಂದ ರಾಜ್ಯಾದ್ಯಂತ ಏಕೀಕರಿಸಿ ಜನನ, ಮರಣ ನೋಂದಣಿ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಸರ್ಕಾರದ ಉಲ್ಲೇಖಿತ (1)ರ ಅಧಿಸೂಚನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಘಟಿಸುವ ಶೇ.100ರಷ್ಟು ಜನನ, ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಜನನ, ಮರಣ ನೋಂದಣಿ ಅಧಿನಿಯಮ 1969ರ ಪ್ರಕರಣ 7(5)ರನ್ವಯ ಜನನ, ಮರಣ ಘಟನೆಗಳು ಘಟಿಸಿದ ಮೂವತ್ತು ದಿನಗಳವರೆಗಿನ ಘಟನೆಗಳನ್ನು ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ಹಾಗೂ ಪ್ರಕರಣ 7(1) ರನ್ವಯ ಜನನ, ಮರಣ ಘಟನೆಗಳು ಸಂಭವಿಸಿದ ಮೂವತ್ತು ದಿನಗಳ ನಂತರದ ವಿಳಂಬ ನೋಂದಣಿಯನ್ನು ನೋಂದಾಯಿಸಲು ಗ್ರಾಮ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.