ಚಿಕ್ಕಮಗಳೂರು:ಬಹಳ ದಿನಗಳ ನಂತರ ಚಿಕ್ಕಮಗಳೂರು ನಗರ ಸೇರಿದಂತೆ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯಲು ಪ್ರಾರಂಭ ಮಾಡಿದೆ. ಒಂದು ಕಡೆ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಹರ್ಷವೂ ಮನೆ ಮಾಡಿದೆ. ಆದರೆ ಇನ್ನೊಂದು ಕಡೆ ಜನರಲ್ಲಿ ಆತಂಕವು ಸೃಷ್ಟಿಸಿದೆ.
ಧಾರಾಕಾರ ಸುರಿಯುತ್ತಿರುವ ಮಳೆಗೆ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿವೆ. ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಬಳಿ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದು, ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆ ಉದ್ದಕ್ಕೂ ವಾಹನಗಳು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಸುರಿಯುತ್ತಿರುವ ಮಳೆ ನಡುವೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯಿಂದ ಮರ ತೆರವು ಕಾರ್ಯ ಭರದಿಂದ ಸಾಗಿದೆ. ಮಧ್ಯಾಹ್ನದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಜು ಮುಸುಕಿದ ವಾತಾವರಣ ನಿರ್ಮಾಣ ಆಗಿದೆ.