ಬೆಂಗಳೂರು : ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕರಿಗೆ ಸೆಪ್ಟೆಂಬರ್ 04ರಿಂದ ಅನ್ವಯಿಸುವಂತೆ ಮಾಸಿಕ ಕನಿಷ್ಠ ವೇತನ ಮತ್ತು ವ್ಯತ್ಯಾಸವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರಿಗೆ 15,196.72 ರೂ. ಮಾಸಿಕ ಕನಿಷ್ಠ ವೇತನದ ಜೊತೆಗೆ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗದಿ ಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು ಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, 14ನೇ ಮತ್ತು 15ನೇ ಹಣಕಾಸು ಆಯೋಗದ ಅನುದಾನ ಅಥವಾ ಗ್ರಾಮ ಪಂಚಾಯತಿಯ ಸಂಪನ್ಮೂಲ ಬಳಸಿಕೊಂಡು ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಡಿಜಿಟಲೀಕರಿಸಲು ಕ್ರಮ ವಹಿಸಿದ್ದು, ಇಲ್ಲಿಯವರೆಗೆ 5,494 ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ.
ಗ್ರಾಮ ಪಂಚಾಯತಿಯ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಆಯವ್ಯಯದಲ್ಲಿ ಘೋಷಿಸಲಾಗಿತ್ತು.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ, ತುಟ್ಟಿ ಭತ್ಯೆ ಪಾವತಿಗೆ ಸರ್ಕಾರದ ಆದೇಶ ಘೋಷಣೆಯನ್ನು ಸಾಕಾರಗೊಳಿಸುವಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಪಾತ್ರವು ಹಿರಿದು ಹಾಗೂ ಮಹತ್ವ ಎಂದು ಪರಿಗಣಿಸಿ, ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಾದ ಅರಿವು ಕೇಂದ್ರಗಳ ಕೆಲಸದ ಸಮಯವನ್ನು 6 ರಿಂದ 8 ಗಂಟೆಗಳಿಗೆ ಏರಿಸಿ, ಮಾಸಿಕ 16,382.52 ರೂ. ಮಾಸಿಕ ಕನಿಷ್ಠ ವೇತನ ಮತ್ತು 1542 ರೂ. ವ್ಯತ್ಯಯವಾಗುವ ತುಟ್ಟಿ ಭತ್ಯೆ ಸೇರಿಸಿ ಮಾಸಿಕ 17,924.52 ರೂ. ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ, ತುಟ್ಟಿ ಭತ್ಯೆ ಪಾವತಿಗೆ ಸರ್ಕಾರದ ಆದೇಶ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿಗಳಿಗೆ ವರ್ಗಾವಣೆಗೊಂಡ ನಂತರ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಅಭಿವೃದ್ಧಿಯಲ್ಲಿ ಅಗಾಧವಾದ ಸಾಧನೆಯಾಗಿದೆ. 5,895 ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ, 4895 ಗ್ರಂಥಾಲಯ ಕಟ್ಟಡಗಳ ನವೀಕರಣ, ಪುಸ್ತಕ, ನಿಯತಕಾಲಿಕೆಗಳ ಸಂಗ್ರಹಣೆ ಇನ್ನಿತರ ಪರಿಕರಗಳನ್ನು ಒದಗಿಸಿ, ಅಭಿವೃದ್ಧಿಪಡಿಸಲಾಗಿದೆ ಎಂದೂ ಪ್ರಿಯಾಂಕ್ ಖರ್ಗೆ ವಿವರಗಳನ್ನು ನೀಡಿದ್ದಾರೆ.
ಶಾಲೆಗಳು ಮುಚ್ಚಿದ್ದರೂ ಮಕ್ಕಳು ಓದುವ ಅಭ್ಯಾಸದಿಂದ ದೂರ ಉಳಿಯಬಾರದು ಎಂಬ ಉದ್ದೇಶದೊಂದಿಗೆ 'ಓದುವ ಬೆಳಕುʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅಜೀಂ ಪ್ರೇಮ್ ಜೀ ಫೌಂಡೇಶನ್, ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಮತ್ತು ಶಿಕ್ಷಣ ಫೌಂಡೇಶನ್ ಸಂಸ್ಥೆಗಳು ನೆರವು ನೀಡಿವೆ. 6 ರಿಂದ 18 ವರ್ಷದ ಮಕ್ಕಳಿಗೆ ಗ್ರಂಥಾಲಯದ ಸದಸ್ಯತ್ವವನ್ನು ನೀಡಿ ಅವರು ಮನೆಗೆ ಪುಸ್ತಕ ತೆಗೆದುಕೊಂಡು ಹೋಗಿ ಓದಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇದರ ಪರಿಣಾಮವಾಗಿ ಇಂದು ಗ್ರಂಥಾಲಯಗಳಲ್ಲಿ ಒಟ್ಟು 46,89,220 ಮಕ್ಕಳು ನೋಂದಣಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.
ಮಕ್ಕಳಲ್ಲಿ ಹೊಸ ಉತ್ಸಾಹ :ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಮಕ್ಕಳ ಸ್ನೇಹಿಯಾಗಿಸಲು ಓದಿನ ಮನೆಗೆ ಹೋಗೋಣ. ಚದುರಂಗ ಆಟ ಆಡೋಣ ಅಭಿಯಾನ, ಗಟ್ಟಿ ಓದು ಅಭಿಯಾನ, ಅಮ್ಮನಿಗಾಗಿ ಒಂದು ಪುಸ್ತಕ, ಪತ್ರ ಬರೆಯುವ ಅಭಿಯಾನ, ಚಿಣ್ಣರ ಚಿತ್ತಾರ, ನಿಮ್ಮ ಗೆಳೆಯರನ್ನು ಗ್ರಂಥಾಲಯಕ್ಕೆ ಕರೆತನ್ನಿ, ಮಕ್ಕಳಿಗೆ ಬೇಸಿಗೆ ಶಿಬಿರ, ಸಣ್ಣ ಕಥೆ ಬರೆಯುವುದು, ನಾನು ಓದುವ ಪುಸ್ತಕಗಳು, ನನ್ನ ಪ್ರೀತಿಯ ಗ್ರಂಥಾಲಯ, ವಾರ್ತಾ ಪತ್ರಿಕೆ ಓದೋಣ ಅಭಿಯಾನಗಳನ್ನು ಕೈಗೊಳ್ಳಲಾಗಿದ್ದು, ಗ್ರಾಮ ಪಂಚಾಯತಿಗಳ ಅರಿವು ಕೇಂದ್ರಗಳು ಗ್ರಾಮೀಣ ಮಕ್ಕಳಲ್ಲಿ ಹೊಸ ಉತ್ಸಾಹ ಹಾಗೂ ಭರವಸೆಯನ್ನು ತಂದುಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ :ಪುತ್ತೂರು: ಗ್ರಾಮ ಪಂಚಾಯತ್ನಲ್ಲಿ ಗಮನ ಸೆಳೆಯುತ್ತಿದೆ ಬೀಕನ್ ಗ್ರಂಥಾಲಯ