ಮಹದಾಯಿ ಯೋಜನೆ (ETV Bharat) ಬೆಳಗಾವಿ: ಕಳಸಾ - ಬಂಡೂರಿ, ಮಹದಾಯಿ ವಿಚಾರದಲ್ಲಿ ಪದೇ ಪದೆ ಕ್ಯಾತೆ ತೆಗೆಯುವ ಗೋವಾ ಸರ್ಕಾರ ಈಗ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಟ್ವೀಟ್ ಈಗ ಕನ್ನಡಿಗರನ್ನು ಕೆರಳುವಂತೆ ಮಾಡಿದೆ.
ಹೌದು, ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ (Progressive River Authority for Welfare and Harmony - PRAWAH) ಇದೇ ಜುಲೈ 7ರಂದು ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಲಿದೆ. ಗೋವಾ ಸರ್ಕಾರದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರ ರಚಿಸಿರುವ ಉಭಯ ರಾಜ್ಯಗಳ ಸಂಸ್ಥೆ ಇದು. ಈ ಸಂಬಂಧ ಗೋವಾ ಸಿಎಂ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದು, ಕರ್ನಾಟಕ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ವನ್ಯಜೀವಿ, ಪರಿಸರ, ಅರಣ್ಯ ಇಲಾಖೆ ಅನುಮತಿ ಇಲ್ಲದೇ ಕರ್ನಾಟಕ ಕಾಮಗಾರಿ ಆರಂಭಿಸಿದೆ ಎಂದು ದೂರಿದ್ದಾರೆ.
ನದಿ ಮೇಲ್ವಿಚಾರಣೆ ಸಮಿತಿ ಎದುರು ಕರ್ನಾಟಕದ ಕೃತ್ಯ ಬಯಲು ಮಾಡುವುದಾಗಿ ಉಲ್ಲೇಖಿಸಿದ್ದಾರೆ. ಆದರೆ, ಪ್ರಮೋದ್ ಸಾವಂತ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಕರ್ನಾಟಕ ಸರ್ಕಾರ ಸಾಬೀತು ಪಡಿಸುವ ಅವಶ್ಯಕತೆಯಿದೆ. ಗೋವಾ ಸಿಎಂ ಇಷ್ಟೆಲ್ಲಾ ಮುತುವರ್ಜಿ ವಹಿಸಿದರೂ ಕರ್ನಾಟಕ ಸರ್ಕಾರ ಮೌನಕ್ಕೆ ಶರಣಾಗಿರೋದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಐದು ದಶಕಗಳಿಂದ ಕಳಸಾ, ಬಂಡೂರಿ ನೀರು ಮಲಪ್ರಭಾ ನದಿಗೆ ಸೇರಬೇಕು ಎನ್ನುವ ಕೂಗಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಯ ಜನರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ, ಗೋವಾ ಪ್ರತಿ ಸಲ ಒಂದಲ್ಲ ಒಂದು ರೀತಿಯಲ್ಲಿ ಕ್ಯಾತೆ ತೆಗೆಯುತ್ತಲೇ ಇದೆ. 2009ರಲ್ಲಿ ಮಹದಾಯಿ ನ್ಯಾಯಾಧೀಕರಣ ರಚನೆಯಾಗಿ, ಆಗಸ್ಟ್ 14ರ 2018ರಲ್ಲಿ ನ್ಯಾಯಾಧೀಕರಣ ತೀರ್ಪು ಬಂದಿದೆ. ಕರ್ನಾಟಕಕ್ಕೆ 13 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಕಳಸಾ ನಾಲಾದಿಂದ 1.72 ಟಿಎಂಸಿ, ಬಂಡೂರಿಯಿಂದ 2.18. ಟಿಎಂಸಿ ನೀರು, ಜಲ ವಿದ್ಯುತ್ ಯೋಜನೆಗೆ 8 ಟಿಎಂಸಿ ಬಳಸಲು ಮಹತ್ವದ ಆದೇಶ ಸಿಕ್ಕಿದೆ. ನ್ಯಾಯಾಧೀಕರಣ ಆದೇಶ ಬಂದು ಆರು ವರ್ಷ ಕಳೆದರೂ ನೀರು ಮಾತ್ರ ಸಿಕ್ಕಿಲ್ಲ.
ಕೇಂದ್ರದ ಪರಿಸರ, ವನ್ಯಜೀವಿ ಹಾಗೂ ಅರಣ್ಯ ಇಲಾಖೆಯಿಂದ ರಾಜ್ಯಕ್ಕೆ ಅನುಮತಿ ಸಿಕ್ಕಿಲ್ಲ. ಈ ಯೋಜನೆಯಿಂದ 500 ಹೆಕ್ಟೇರ್ ಪ್ರದೇಶದ ಅರಣ್ಯ ನಾಶ ಆಗುತ್ತದೆ ಎಂದು ಗೋವಾ ಆರೋಪಿಸಿದೆ. ಇನ್ನು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಪರಿಷ್ಕೃತ ಯೋಜನಾ ವರದಿ ತಯಾರಿಸಲಾಗಿದ್ದು, ಪೈಪ್ ಲೈನ್ ಮೂಲಕ ಕಾಮಗಾರಿ ಮಾಡಿ ಕೇವಲ 64 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇನ್ನು ಇದಕ್ಕೆ ಪರ್ಯಾಯವಾಗಿ ಅಥಣಿ ತಾಲೂಕಿನ ತೆಲಸಂಗ ಬಳಿ ಅರಣ್ಯ ಬೆಳೆಸುವ ವಾಗ್ದಾನ ಕೂಡ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 1500 ಕೋಟಿ ಅನುದಾನ ಮೀಸಲು ಇಡಲಾಗಿದೆ. ಅರಣ್ಯ, ಪರಿಸರ, ವನ್ಯಜೀವಿ ಮಂಡಳಿ ಅನುಮತಿ ಸಿಗುವ ಮೊದಲೇ ಬಿಜೆಪಿ ಸರ್ಕಾರ ಟೆಂಡರ್ ಕೊಟ್ಟಿತ್ತು.
ಇಲ್ಲದ ಹುಲಿ ಭಯ ಹುಟ್ಟಿಸುವ ಗೋವಾ ಕುತಂತ್ರ:ಕೇಂದ್ರ ಸರ್ಕಾರಕ್ಕೆ ಹುಲಿ ಭಯ ಹುಟ್ಟಿಸಿ ಕರ್ನಾಟಕಕ್ಕೆ ಗೋವಾ ಸರ್ಕಾರ ಹಿನ್ನಡೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ರಾಷ್ಟ್ರೀಯ ಹುಲಿ ಸರಂಕ್ಷಣಾ ಆಯೋಗಕ್ಕೆ ದೂರು ಕೂಡ ಸಲ್ಲಿಸಿದೆ. ಆದರೆ, ಕಣಕುಂಬಿ ಅರಣ್ಯ ಪ್ರದೇಶದಲ್ಲಿ ಹುಲಿಗಳಿವೆ ಎಂದು ಗೋವಾ ಸುಳ್ಳು ಆರೋಪ ಮಾಡಿದೆ. ಮಹಾದಾಯಿ ಯೋಜನೆ ಜಾರಿಯಿಂದ ಹುಲಿ ಸಂತತಿಗೆ ಧಕ್ಕೆ ಆಗಲಿದೆ ಎಂದು ದೂರಿದೆ. ಇದರ ನಡುವೆ ಕಣಕುಂಬಿ ಪ್ರದೇಶದಲ್ಲಿ ಹುಲಿ ಸಂತತಿ ಇಲ್ಲ ಎಂದು ಹುಲಿ ಸರಂಕ್ಷಣಾ ಆಯೋಗದಿಂದಲೇ ಮಾಹಿತಿ ನೀಡಲಾಗಿದೆ.
ಈ ಮೊದಲು ಪರಿಸರವಾದಿಗಳನ್ನು ಕರ್ನಾಟಕ ವಿರುದ್ಧ ಎತ್ತಿಕಟ್ಟಿ ಯೋಜನೆಗೆ ಗೋವಾ ಅಡ್ಡಗಾಲು ಹಾಕಿತ್ತು. ಈಗ ಕೇಂದ್ರದ ಮೇಲೆ ಪ್ರಭಾವ ಬೀರಿ ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ ಸಂಸ್ಥೆ ಕಣಕುಂಬಿಗೆ ಕಳಿಸಿ ಕೊಡುವ ಮೂಲಕ ಮತ್ತೆ ಕ್ಯಾತೆ ಆರಂಭಿಸಿದೆ. ಕಣಕುಂಬಿಗೆ ಭೇಟಿ ನೀಡುತ್ತಿರುವ ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ (ಪ್ರವಾಹ) ಸಂಸ್ಥೆಯ ಅಧ್ಯಕ್ಷ ಸ್ಕ್ವಾಟ್ ಗೋವಾದ ಪಣಜಿಯವರು. ಹಾಗಾಗಿ, ಸಹಜವಾಗಿ ಅವರ ರಾಜ್ಯದ ಪರ ವರದಿ ನೀಡುವ ಅನುಮಾನ ಮೂಡಿದೆ. ವಿಪರ್ಯಾಸ ಎಂದರೆ ಆ ಸಂಸ್ಥೆಯಲ್ಲಿ ರಾಜ್ಯದ ಯಾವೊಬ್ಬರು ಸದಸ್ಯರಿಲ್ಲ
ಈ ಕುರಿತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಮಾತನಾಡಿ, ಕಳಸಾ ಬಂಡೂರಿ ಪ್ರದೇಶದಲ್ಲಿ ಇಲ್ಲದ ಹುಲಿಗಳ ಭಯ ಹುಟ್ಟಿಸಲು ಗೋವಾ ಮುಂದಾಗಿತ್ತು. ಈಗ ಮತ್ತೊಂದು ಕುತಂತ್ರ ಹೆಣದಿದೆ. ಕಣಕುಂಬಿಗೆ ಪ್ರವಾಹ ಸಂಸ್ಥೆ ಭೇಟಿ ನೀಡುವಂತೆ ಮಾಡಿದೆ. ಅಲ್ಲದೇ ಗೋವಾ ಸಿಎಂ ಟ್ವೀಟ್ ಮಾಡಿದ್ದು, ನಮ್ಮ ಸತತ ಪ್ರಯತ್ನದ ಫಲವಾಗಿ ಜುಲೈ 7ರಂದು ಕಣಕುಂಬಿಗೆ ತೆರಳಲಿರುವ ಪ್ರವಾಹ ಸಂಸ್ಥೆ ಕರ್ನಾಟಕದ ಕೃತ್ಯ ಬಯಲು ಮಾಡುವುದಾಗಿ ಹೇಳಿಕೊಂಡಿದ್ದಾರೆ. ವಿಪರ್ಯಾಸ ಎಂದರೆ ಇದನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ನಮಗೆ ಹೊಡೆತ ಬೀಳಲಿದ್ದು, ಯೋಜನೆಗೆ ಹಿನ್ನಡೆ ಆಗುವ ಸಾಧ್ಯತೆಯಿದೆ. ತಕ್ಷಣವೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡು ಗೋವೆಯ ಕುತಂತ್ರವನ್ನು ಸಮರ್ಥವಾಗಿ ಎದುರಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ, ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸಮಗ್ರ ಪತ್ರ ಬರೆದಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಅನಿವಾರ್ಯ, ಇದು ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ಕರ್ನಾಟಕ ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಇದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಗೋವಾಗೆ ಇರುವ ಗಂಭೀರತೆ ನಮ್ಮ ಸರ್ಕಾರಕ್ಕೆ ಯಾಕಿಲ್ಲ. ಕಣಕುಂಬಿಗೆ ಭೇಟಿ ನೀಡುತ್ತಿರುವ ಪ್ರವಾಹ ಸಂಸ್ಥೆ ಮೇಲೆ ನಿಗಾ ವಹಿಸಬೇಕು. ಇಲ್ಲದಿದ್ದರೆ ಕರವೇ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:'ಪ್ರವಾಹ್' ನದಿ ಪ್ರಾಧಿಕಾರದಿಂದ 3 ದಿನ ಮಹಾದಾಯಿ ಜಲಾನಯನ ಪ್ರದೇಶಗಳ ಪರಿಶೀಲನೆ - Mahadayi Issue