ಕರ್ನಾಟಕ

karnataka

ETV Bharat / state

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಕನ್ನಡದಲ್ಲೇ ಮಾತು ಆರಂಭಿಸಿದ ಆನಂದ್ ಮಹಿಂದ್ರಾ - INVEST KARNATAKA 2025

ರಾಜ್ಯದ ಔದ್ಯೋಗಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ಮೊದಲ ದಿನವೇ ಹಲವು ರಾಷ್ಟ್ರಗಳ ಉದ್ಯಮಿಗಳು ಭಾಗಿಯಾಗುವ ಮೂಲಕ ಕೇಂದ್ರ ಬಿಂದುವಾದರು.

INVEST KARNATAKA 2025
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

By ETV Bharat Karnataka Team

Published : Feb 12, 2025, 8:09 AM IST

ಬೆಂಗಳೂರು : ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಾರಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ವಿವಿಧ ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ರೂ. ಮೊತ್ತದ ಒಪ್ಪಂದಗಳಿಗೆ ಕ್ರೆಡಲ್ ಸಹಿ ಹಾಕಿದೆ.

ಸಮಾವೇಶದ ಉದ್ಘಾಟನೆ ಬಳಿಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿದ ಸಂಸ್ಥೆಗಳ ಮುಖ್ಯಸ್ಥರು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದ ಒಪ್ಪಂದ ಪತ್ರ ಸ್ವೀಕರಿಸಿದರು.

ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರು ಉಪಸ್ಥಿತರಿದ್ದರು. ನವೀಕರಿಸಹುದಾದ ಇಂಧನ ಕ್ಷೇತ್ರದಲ್ಲಿ ಒಟ್ಟು 13 ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿದ್ದು, ಒಟ್ಟು 3,42,925 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದ 78,253 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

ಪ್ರಮುಖ ಹೂಡಿಕೆಗಳು :

  • ಜೆಎಸ್ ಡಬ್ಲ್ಯು ನಿಯೋ ಎನರ್ಜಿ ಲಿಮಿಟೆಡ್ - 56 ಸಾವಿರ ಕೋಟಿ ರೂ.
  • ರಿನ್ಯೂ ಪ್ರೈ.ಲಿ. ಮತ್ತು ಟಾಟಾ ಪವರ್ ರಿನಿವೇಬಲ್ ಎನರ್ಜಿ ಲಿಮಿಟೆಡ್​ಗಳು ತಲಾ 50 ಸಾವಿರ ಕೋಟಿ ರೂ.
  • ಸೆರೆಂಟಿಕಾ ರಿನಿವೇಬಲ್ ಇಂಡಿಯಾ ಪ್ರೈ.ಲಿ. 43,975 ಕೋಟಿ ರೂ.
  • ಮಹೀಂದ್ರ ಸಸ್ಟೆನ್ ಪ್ರೈ.ಲಿ. 35,000 ಕೋಟಿ ರೂ. ಸೇರಿದಂತೆ ವಿವಿಧ ಕಂಪನಿಗಳು ಒಟ್ಟಾರೆ 3,42,925 ಕೋಟಿ ರೂ. ಮೊತ್ತದ ಹೂಡಿಕೆ.

12 ವಿಶೇಷ ಹೂಡಿಕೆ ವಲಯಗಳ ಸ್ಥಾಪನೆ: ಜಾಗತಿಕ ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆ ಸಾಧಿಸಲು ಈಗ ಇರುವ 200ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳ ಜತೆಗೆ 30 ಸಾವಿರ ಎಕರೆ ವಿಸ್ತೀರ್ಣದಲ್ಲಿ 12 ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

ಇದಕ್ಕಾಗಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದು, ಇಲ್ಲೆಲ್ಲ ವಿಶ್ವ ದರ್ಜೆಯ ಮೂಲಸೌಕರ್ಯ ಒದಗಿಸಲಾಗುವುದು. ಕೆಐಎಡಿಬಿ ರಾಜ್ಯದಲ್ಲಿ ಈಗಾಗಲೇ 85 ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದ್ದು, ಇಲ್ಲಿ 25 ಸಾವಿರ ಕೈಗಾರಿಕೆಗಳು ನೆಲೆಯೂರಿವೆ ಎಂದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

ಉತ್ಪಾದನಾ ವೆಚ್ಚ ಕಡಿಮೆಯಾಗಿ, ದಕ್ಷತೆ ಹೆಚ್ಚಾಗಬೇಕು ಎನ್ನುವುದು ಸರ್ಕಾರದ ನೀತಿಯಾಗಿದೆ. ಇದನ್ನು ಸಾಧಿಸಲು `ಕ್ಲಸ್ಟರ್ ಆಧಾರಿತ ನೀತಿ’ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಬೇರೆ ಬೇರೆ ಭಾಗಗಳಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಇ.ವಿ.ತಯಾರಿಕೆ ಕ್ಲಸ್ಟರ್, ಫಾರ್ಮಾ, ಡೀಪ್-ಟೆಕ್ ಮತ್ತು ಡ್ರೋನ್ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳಿಗೆ ಹತ್ತಿರದ ನದಿ ಮೂಲಗಳಿಂದ ಶುದ್ಧ ಕುಡಿಯುವ ನೀರು ಪೂರೈಸಲು 3,800 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ರೂಪಿಸಲಾಗಿದೆ ಎಂದು ಅವರು ನುಡಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

ಜಾಗತಿಕ ಮಟ್ಟದಲ್ಲಿ ಚೀನಾದಿಂದ ತೀವ್ರ ಸವಾಲು ಎದುರಾಗಿದ್ದು, ತಯಾರಿಕೆ ವಲಯದ ಚಿತ್ರಣವೇ ಬದಲಾಗಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಜಾಗತಿಕ ಅಸ್ಥಿರತೆಯ ಸಮಸ್ಯೆಯೂ ಇದೆ. ಸರ್ಕಾರವು ಪ್ರಗತಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು, ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ತಯಾರಿಕೆ ಮತ್ತು ನಾವೀನ್ಯತೆಯ ತೊಟ್ಟಿಲನ್ನಾಗಿ ಪ್ರತಿಷ್ಠಾಪಿಸಲಿದೆ ಎಂದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

ತಂತ್ರಜ್ಞಾನದ ಬಳಕೆ, ಹೂಡಿಕೆ ಆಕರ್ಷಣೆ ಮತ್ತು ಸ್ಪರ್ಧಾತ್ಮಕ ಉದ್ಯಮಗಳ ಸ್ಥಾಪನೆಯೇ ಭವಿಷ್ಯದ ಆರ್ಥಿಕ ಬೆಳವಣಿಗೆಯ ನಿರ್ಣಾಯಕ ಶಕ್ತಿಗಳಾಗಿವೆ. ಇದಕ್ಕಾಗಿ ಕೈಗಾರಿಕಾ ರಂಗದಲ್ಲಿ ಡಿಜಿಟಲ್ ಪರಿವರ್ತನೆಯನ್ನು ಅಳವಡಿಸಿ ಕೊಳ್ಳಲಾಗುತ್ತಿದೆ. ಜತೆಗೆ ಇಂಗಾಲವನ್ನು ಕಡಿಮೆ ಹೊರಸೂಸುವ ಹಾಗೂ ಪರಿಸರಸ್ನೇಹಿ ಉಪಕ್ರಮಗಳಿಗೂ ಗಮನ ಹರಿಸಲಾಗಿದೆ. 55 ಲಕ್ಷ ಜನರಿಗೆ ಉದ್ಯೋಗ ನೀಡಿರುವ 8 ಲಕ್ಷ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ಅವರು ವಿವರಿಸಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

ಕನ್ನಡದಲ್ಲೇ ಆನಂದ್ ಮಹೀಂದ್ರ ಮಾತು:ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಉದ್ಯಮಿ ಆನಂದ್ ಮಹೀಂದ್ರ ಅವರು ಕನ್ನಡದಲ್ಲೇ ಮಾತು ಆರಂಭಿಸುತ್ತಾ, 1960ರ ಆಚೀಚೆ ತಾವು ತಮ್ಮ ತಂದೆ - ತಾಯಿಗಳೊಂದಿಗೆ ಕೊಡಗಿನ ಕುಟ್ಟದಲ್ಲಿ ಬೆಳೆದ ದಿನಗಳ ಅನುಭವಗಳನ್ನು ಹಂಚಿಕೊಂಡರು. 60 ವರ್ಷಗಳ ನೆನಪಿನಾಳಕ್ಕೆ ಜಾರಿದ ಅವರು, ಪಂಜಾಬಿನವರಾದ ತಾವು ಇಲ್ಲಿನ ಕಾಫಿ ಪ್ಲಾಂಟೇಶನ್​ನಲ್ಲಿ ಕಲಿತ ಪಾಠಗಳನ್ನೇ ಉದ್ಯಮದಲ್ಲೂ ಅಳವಡಿಸಿಕೊಂಡಿರುವುದಾಗಿ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ತಾವು ರಾಜ್ಯದಲ್ಲಿ ಮರುಬಳಕೆ ಇಂಧನ, ಪ್ರವಾಸ ಮತ್ತು ಆತಿಥ್ಯೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣೆ, ವಿದ್ಯುಚ್ಚಾಲಿತ ತ್ರಿಚಕ್ರ ವಾಹನ ತಯಾರಿಕೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ 40 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದರು. ಮಹೀಂದ್ರ ಸಮೂಹವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಸದ್ಯಕ್ಕೆ 5,000 ಕೋಟಿ ರೂ. ಮೊತ್ತದ ಯೋಜನೆಗಳನ್ನು ಕೈಗೊಂಡಿದೆ. ಮುಂದಿನ ದಿನಗಳಲ್ಲಿ 6,000 ಕೋಟಿ ರೂ. ಹೂಡುವುದಾಗಿ ಅವರು ಪ್ರಕಟಿಸಿದರು.

ಕೊನೆಯಲ್ಲಿ `ಕರ್ನಾಟಕಕ್ಕೆ ಧನ್ಯವಾದಗಳು’ ಎನ್ನುವ ಮೂಲಕ ಕನ್ನಡದಲ್ಲೇ ಮಾತು ಮುಗಿಸಿ, ಎಲ್ಲರ ಮನ ಗೆದ್ದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ETV Bharat)

1 ಲಕ್ಷ ಕೋಟಿ ರೂ. ಹೂಡಿಕೆ: ಸಜ್ಜನ್ ಜಿಂದಾಲ್:ತಮ್ಮ ನೇತೃತ್ವದ ಜಿಂದಾಲ್ ಸಮೂಹವು ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಒಟ್ಟು 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ತೊಡಗಿಸಲಿದೆ. ಇದರಲ್ಲಿ ಉಕ್ಕು ಉತ್ಪಾದನೆ ವಲಯದಲ್ಲಿ 45 ಸಾವಿರ ಕೋಟಿ ರೂ. ಮತ್ತು ಆತಿಥ್ಯೋದ್ಯಮ, ಸೌರವಿದ್ಯುತ್, ಪರಿಸರಸ್ನೇಹಿ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ 56 ಸಾವಿರ ಕೋಟಿ ರೂ. ಹೂಡಲಾಗುವುದು ಎಂದು ಉದ್ಯಮಿ ಸಜ್ಜನ್ ಜಿಂದಾಲ್ ಸಹ ಹೇಳಿದರು.

ಇದನ್ನೂ ಓದಿ: ಬೆರಳತುದಿಯಲ್ಲಿ 30 ಇಲಾಖೆಗಳ 150 ಸೇವೆಗಳು ಲಭ್ಯ: ಏಕಗವಾಕ್ಷಿ ಪೋರ್ಟಲ್​​ಗೆ ಸಿಎಂ ಚಾಲನೆ - SINGLE WINDOW PORTAL

ABOUT THE AUTHOR

...view details