ತುಮಕೂರು:ಜಿಲ್ಲೆಯಲ್ಲಿ ಬಾಲಕಿಯೊಬ್ಬಳನ್ನು 15,000 ರೂ.ಗಳಿಗೆ ಜೀತಕ್ಕೆ ಇರಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾಲ ತೀರಿಸಲಾಗದೇ, ತುಮಕೂರಿನ ಬಾಲಕಿಯನ್ನು ಆಂಧ್ರದ ಹಿಂದೂಪುರದಲ್ಲಿ 15 ಸಾವಿರ ರೂ.ಗಳಿಗೆ ಕೆಲಸಕ್ಕೆಂದು ಬಿಡಲಾಗಿತ್ತು.
ತುಮಕೂರಿನ ಬಾಲಕಿಯನ್ನು ಅವಳ ಚಿಕ್ಕಮ್ಮನ (ತಾಯಿಯ ಸಹೋದರಿ) ಅತ್ತೆ ಮತ್ತು ಮಾವ ತಾವು ಮಾಡಿದ್ದ ಸಾಲ ತೀರಿಸಲಾಗದ ಕಾರಣ ಆಂಧ್ರದಲ್ಲಿ ಕೆಲಸಕ್ಕೆಂದು 15,000 ರೂ.ಗಳಿಗೆ ಅಡವಿಟ್ಟಿದ್ದರು. ತುಮಕೂರಿನ ದಿಬ್ಬೂರಿನಲ್ಲಿ ವಾಸವಾಗಿರುವ ದಂಪತಿಯ ಮಗಳನ್ನು ಹಿಂದೂಪುರದಲ್ಲಿರುವ ತಂಗಿಯು ತನಗೆ ಹೆರಿಗೆಯಾಗಿದೆ, ಸ್ವಲ್ಪ ದಿನಗಳ ಕಾಲ ಮಗುವನ್ನು ತನ್ನ ಬಳಿ ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದಳು. ಬಾಲಕಿಯ ತಾಯಿಯು ತನ್ನ ಸಹೋದರಿಯ ಮಾತಿಗೆ ಒಪ್ಪಿ ಮಗಳನ್ನು ಕಳಿಸಿದ್ದಳು.
ಆದರೆ, ಅಲ್ಲಿಗೆ ಹೋದ ನಂತರ ಬಾಲಕಿಯ ಚಿಕ್ಕಮ್ಮನ ಅತ್ತೆ ಮತ್ತು ಮಾವ ತಾವು ಮಾಡಿದ ಸಾಲಕ್ಕಾಗಿ ಆಂಧ್ರದ ವ್ಯಕ್ತಿಯೊಬ್ಬರಿಗೆ 15 ಸಾವಿರ ರೂ.ಗಳಿಗೆ ಬಾತುಕೋಳಿ ಕಾಯಲು ಹಾಗೂ ಮನೆ ಕೆಲಸ ಮಾಡಲು ಅಡವಿಟ್ಟಿದ್ದರೆಂಬುದು ಗೊತ್ತಾಗಿದೆ.
ಕೆಲ ದಿನಗಳ ನಂತರ ಬಾಲಕಿಯ ತಾಯಿಯು ತನ್ನ ಸಹೋದರಿಗೆ ಫೋನ್ ಕರೆ ಮಾಡಿದ್ದಾರೆ. ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದು ಕೇಳಿದ್ದಾರೆ. ಆದರೆ, ಹಲವು ಕಾರಣ ನೀಡಿದ ಸಹೋದರಿಯ ಮನೆಯವರು ಒಂದು ತಿಂಗಳ ಬಳಿಕ ಬಾಲಕಿಯನ್ನು ಕಳುಹಿಸುತ್ತೇವೆ ಎಂದಿದ್ದಾರೆ. ಆದರೆ ಒಂದು ತಿಂಗಳು ಕಳೆದರೂ ಮಗಳನ್ನು ಕಳುಹಿಸಿಕೊಟ್ಟಿಲ್ಲ. ಹೀಗಾಗಿ, ನೇರವಾಗಿ ಬಾಲಕಿಯ ತಾಯಿ ಆಂಧ್ರಕ್ಕೆ ತೆರಳಿ ವಿಚಾರಿಸಿದಾಗ ಅಡವಿಟ್ಟಿರುವ ಸಂಗತಿ ತಿಳಿದು ಬಂದಿದೆ.
ಕೂಡಲೇ ಕುಮಾರ್, ಕಾರ್ಮಿಕ ಸಂಘಟನೆಯ ಮೋಹನ್ ಮತ್ತು ನಾರಾಯಣ ಎಂಬವರ ಸಹಾಯ ಪಡೆದು ಪೊಲೀಸರ ಮೂಲಕ ಆಂಧ್ರಕ್ಕೆ ತೆರಳಿ ಮಗಳನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮಹಿಳೆಯು ತನ್ನ ಸಹೋದರಿಯ ಅತ್ತೆ ಮತ್ತು ಮಾವನ ವಿರುದ್ಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ, ''ಬಾಲಕಿಯನ್ನು ಜೀತಕ್ಕೆ ಇರಿಸಲಾಗಿದ್ದ ಪ್ರಕರಣದ ಬಗ್ಗೆ ಮಾಹಿತಿ ಬಂದಿದೆ. ಜೀತಕ್ಕೆ ಇಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಪರಿಶೀಲನೆ ನಡೆಸಲಾಗುತ್ತಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಉಡುಪಿ: ಗರುಡ ಗ್ಯಾಂಗ್ ಸದಸ್ಯನಿಗೆ ಆಶ್ರಯ, ಹಣಕಾಸು ನೀಡಿದ ಆರೋಪ - ಯುವತಿ ಬಂಧನ - Udupi Gang War