ಮಂಗಳೂರು: ಮನೆಯಲ್ಲಿ ಮದುವೆಯ ವಯಸ್ಸಿಗೆ ಬಂದ ಗಂಡಿಗೆ ಸರಿಯಾದ ಹೆಣ್ಣು ಸಿಗುತ್ತಿಲ್ಲ. ಹೆಣ್ಣಿಗೆ ಸರಿಯಾದ ಗಂಡಿನೊಂದಿಗೆ ಕಂಕಣ ಭಾಗ್ಯ ಕೂಡಿಬರುತ್ತಿಲ್ಲ ಎಂದು ಮನೆಯವರು ಚಿಂತಿಸುವುದು ಸಾಮಾನ್ಯ. ಇದಕ್ಕಾಗಿ ಜಾಹೀರಾತು, ಬ್ರೋಕರ್ ಮೊರೆ ಹೋಗಿ, ಮದುವೆ ನಿಶ್ಚಯಿಸಲು ಬೇಕಾದ ಎಲ್ಲಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಈ ನಡುವೆ ಪ್ರೇತಗಳ ಮದುವೆ ಮಾಡಿಸಲು ಸಜ್ಜಾಗಿರುವ ಕುಟುಂಬವೊಂದು ಅದಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಿ ಗಮನ ಸೆಳೆದಿದೆ.
ಬೇಕಿದೆ ಪ್ರೇತ ವರ:ಇದು ಅಚ್ಚರಿಯೆನಿಸಿದರೂ ನಿಜ. 30 ವರ್ಷಗಳ ಹಿಂದೆ ಸಾವನ್ನಪ್ಪಿದ ಹೆಣ್ಣು ಮಗುವಿಗೆ ಇದೀಗ 30 ವರ್ಷದ ಹಿಂದೆ ತೀರಿ ಹೋದ ಅದೇ ಜಾತಿಯ ಇತರ ಬದಿಯ ಗಂಡು ಮಗುವಿನ ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ, ಸಂಪರ್ಕಿಸಿ ಎಂದು ಪತ್ರಿಕಾ ಪ್ರಕಟಣೆಯೊಂದು ಕರಾವಳಿಯಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿದೆ. ತಮಗೆ ಬೇಕಾದ ಸಂಬಂಧ ಕೂಡಾವಳಿ ಆಗದಿದ್ದರಿಂದಲೇ ಗತಿಸಿಹೋದ ಮಗುವಿನ ಕುಟುಂಬಸ್ಥರು ಜಾಹಿರಾತು ಮೂಲಕ ಪ್ರೇತ ವರ ಹುಡುಕುವ ಪ್ರಯತ್ನಕ್ಕೆ ಮುಂದಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಪತ್ರಿಕೆ ಪ್ರಕಟಣೆ ನೋಡಿರುವ ಹಲವು ಮಂದಿ ಸಂಪರ್ಕಿಸಿದ್ದು, ಮದುವೆಯೂ ನಿಶ್ಚಯವಾಗುವಂತಹ ಎಲ್ಲಾ ಸಕಾರಾತ್ಮಕ ಪ್ರತಿಕ್ರಿಯೆಯೂ ಬಂದಿದೆ ಎಂದು ತಿಳಿಸಿದ್ದಾರೆ.
ಪ್ರೇತಗಳ ಮದುವೆ ಜಾಹೀರಾತು (ETV Bharat) ಇದು ತಮಾಷೆಯಲ್ಲ, ಇದಕ್ಕಿದೆ ಭಾವನಾತ್ಮಕ ನಂಟು:ಈ ಜಾಹೀರಾತು ಇತರರಿಗೆ ವಿಚಿತ್ರವಾಗಿ ಕಂಡರೂ ತುಳುವರ ನಾಡಿನಲ್ಲಿ ಇದು ಭಾವನಾತ್ಮಕ ವಿಷಯದ ನಂಟಾಗಿದೆ. ಮದುವೆಯಾಗದೆ ಹೆಣ್ಣು ಅಥವಾ ಗಂಡು ಮೃತಪಟ್ಟರೆ ಅವರಿಗೆ ಸದ್ಗತಿಯಿಲ್ಲ ಎಂಬುದು ತುಳುವರ ಬಲವಾದ ನಂಬಿಕೆ. ಆದ್ದರಿಂದ ಅದೃಶ್ಯರೂಪದಲ್ಲಿ ತಮ್ಮ ಕುಟುಂಬದೊಂದಿಗೆ ಸದಾಕಾಲ ಜೀವಿಸುತ್ತಿರುವ ಅವಿವಾಹಿತರಿಗೆ ಮದುವೆಯ ಸಂಸ್ಕಾರಕ್ಕಾಗಿ ಪ್ರೇತ ಮದುವೆ ಮಾಡಿಸಲಾಗುತ್ತದೆ. ಆದ್ದರಿಂದ ಮದುವೆಯಾಗದೆ ಸತ್ತವರು ಪ್ರಾಯ ಪ್ರಬುದ್ಧವಾಗುವ ಹೊತ್ತಿಗೆ ತಮ್ಮ ಇತರ ಜೀವಂತ ಮಕ್ಕಳಂತೆ ಆ ಮಗುವಿನ ಮದುವೆಯ ಬಗ್ಗೆಯೂ ಕುಟುಂಬಸ್ಥರು ಚಿಂತಿಸುತ್ತಾರೆ. ಇನ್ನು ಕೆಲವು ಪ್ರಕರಣದಲ್ಲಿ ಕೆಲವು ಕಡೆಗಳಲ್ಲಿ ಗತಿಸಿದವರೇ ತಮ್ಮ ಮದುವೆಯ ಬಗ್ಗೆ ಕುಟುಂಬದವರಿಗೆ ತೊಂದರೆ ನೀಡಿ ನೆನಪಿಸುವುದೂ ಇದೆ ಎಂಬ ನಂಬಿಕೆಯೂ ಇದೆ. ಆದ್ದರಿಂದ ಕುಟುಂಬಸ್ಥರು ಜಾತಿ, ಬದಿ ನೋಡಿ ಹೆಣ್ಣು-ಗಂಡು ಒಪ್ಪಿಗೆಯಾಗಿ ಕೂಡಾವಳಿ ಆದಲ್ಲಿ ಪ್ರೇತಮದುವೆ ಮಾಡಿಸುತ್ತಾರೆ. ಅವಿವಾಹಿತರು ಸಾವನ್ನಪ್ಪಿದರೆ, ಅವರಿಗೆ ಮದುವೆಯಾಗುವ ವಯಸ್ಸು ಬಂದಾಗ, ಜೀವಂತ ಇದ್ದವರಿಗೆ ಮದುವೆ ಮಾಡುವ ರೀತಿಯಲ್ಲೇ ವಿವಾಹ ಕಾರ್ಯ ನಡೆಸಲಾಗುತ್ತದೆ.
ಶಾಸ್ತ್ರೋಕ್ತವಾಗಿ ನಡೆಯುವ ವಿವಾಹ: ಪ್ರೇತಗಳ ಮದುವೆ ಎಂದರೆ ಅದು ಕಾಟಾಚಾರದ ಮದುವೆಯಲ್ಲ. ಜೀವಂತ ಇರುವವರ ವ್ಯಕ್ತಿಯ ವಿವಾಹ ಕಾರ್ಯದಲ್ಲಿ ನಡೆಸುವ ಎಲ್ಲಾ ಪದ್ಧತಿಗಳನ್ನೂ ಅನುಸರಿಸಲಾಗುತ್ತದೆ. ಹೆಣ್ಣು-ಗಂಡು ನೋಡುವ ಶಾಸ್ತ್ರ, ನಿಶ್ಚಿತಾರ್ಥ, ಮದುವೆ ದಿನ ವರನ ಮನೆಗೆ ದಿಬ್ಬಣ ಬರುವುದು, ಹೆಣ್ಣಿಗೆ ಸೀರೆ, ರವಿಕೆ, ಕರಿಮಣಿ, ಕಾಲುಂಗುರ, ಬಳೆ, ಗಂಡಿಗೆ ಪಂಚೆ, ಶರ್ಟ್ ಸಿದ್ಧಪಡಿಸಿ ಶಾಸ್ತ್ರಬದ್ಧವಾಗಿಯೇ ವಿವಾಹ ನಡೆಸಲಾಗುವುದ. ಇದರ ಜೊತೆಗೆ ಧಾರೆಯ ಬಳಿಕ ಸೇರಿದವರಿಗೆ ಮದುವೆಯ ಊಟವನ್ನೂ ಬಡಿಸಲಾಗುತ್ತದೆ. ಸಾಮಾನ್ಯವಾಗಿ ಆಷಾಢ ತಿಂಗಳ ರಾತ್ರಿ ವೇಳೆ ಪ್ರೇತಗಳ ಮದುವೆ ನಡೆಸುವ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ.
ಇದನ್ನೂ ಓದಿ: ಮಾರಿ ಕಳೆವ ಮಾಂತ್ರಿಕ ಶಕ್ತಿ 'ಆಟಿ ಕಳೆಂಜ'; ತುಳುನಾಡಿನಲ್ಲೊಂದು ವಿಶಿಷ್ಟ ಆಚರಣೆ