ಮೈಸೂರು:ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು ಎಂಬುದು ದೇಶಕ್ಕೆ ಗೊತ್ತಿದೆ. ತಕ್ಷಣ ಅದಾನಿಯನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಸಿಎಂ, ಗೌತಮ್ ಅದಾನಿಗೆ ರಕ್ಷಣೆ ಕೊಡುತ್ತಿರುವ ಸತ್ಯವನ್ನು ದೇಶದ ಜನರಿಗೆ ಮಾಧ್ಯಮಗಳು ತೋರಿಸುತ್ತಿಲ್ಲ ಎಂದು ತಿಳಿಸಿದರು.
ರಾಜ್ಯದ ರೈತರಿಗೆ ಕೇಂದ್ರ ಮಾಡಿದ ಅನ್ಯಾಯ ಸರಿಯಾ?:ರೈತರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ರಾಜ್ಯಕ್ಕೆ ಶೇ.58 ರಷ್ಟು ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ. ವರ್ಷದಿಂದ ವರ್ಷಕ್ಕೆ ನಬಾರ್ಡ್ನಿಂದ ರಾಜ್ಯದ ರೈತರಿಗೆ ಕೊಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಆದರೆ ಈ ಬಾರಿ ಕಡಿತಗೊಳಿಸಿದೆ. ರೈತರಿಗೆ ಶೇ 4.5 ಬಡ್ಡಿದರದಲ್ಲಿ ನಬಾರ್ಡ್ ರಾಜ್ಯದ ರೈತರಿಗೆ ಸಾಲ ಕೊಡುತ್ತದೆ. ಈ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೆ ಈಗ ನಬಾರ್ಡ್ ಸಾಲದ ಪ್ರಮಾಣ ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕ್ಗಳ ಬಳಿ ಸಾಲಕ್ಕೆ ಶೇ.10 ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕೆ ಆಗುವ ನಷ್ಟ. ಇಷ್ಟು ದೊಡ್ಡ ಪ್ರಮಾಣದ ಅನ್ಯಾಯವನ್ನು ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಿಂದಲೇ ಆಯ್ಕೆ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಅನ್ಯಾಯ ಸರಿಪಡಿಸಿ ಎಂದು ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಲಿ ಎಂದರು.
ರಾಜ್ಯದ ರೈತರಿಗೆ ಕೇಂದ್ರ ಅನ್ಯಾಯ ನಾಡಿದ್ದು ಸರಿ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದರೆ ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿಯವರು ಏಕೆ ಮಾತನಾಡುತ್ತಿಲ್ಲ ಎಂದು ಸಿಎಂ ಪ್ರಶ್ನಿಸಿದರು.