ಕರ್ನಾಟಕ

karnataka

ETV Bharat / state

ಬಜೆಟ್​ನಲ್ಲಿ ಘೋಷಿಸಿದ್ದ ಅನುದಾನ ಬಿಡುಗಡೆಗೆ ಕೋರಿ ಹೈಕೋರ್ಟ್​ಗೆ ವಿಶ್ವ ಗಾಣಿಗ ಸಮುದಾಯದ​ ಟ್ರಸ್ಟ್​ ಅರ್ಜಿ - BUDGET FUND

ಬಜೆಟ್​ನಲ್ಲಿ ಘೋಷಿಸಿದ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ವಿಶ್ವ ಗಾಣಿಗ ಸಮುದಾಯ ಚಾರಿಟಬಲ್ ಟ್ರಸ್ಟ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಹೈಕೋರ್ಟ್,High Court,budget,ಬಜೆಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Feb 15, 2025, 8:12 AM IST

ಬೆಂಗಳೂರು:ವಿಶ್ವ ಗಾಣಿಗ ಸಮುದಾಯ ಚಾರಿಟಬಲ್ ಟ್ರಸ್ಟ್​ (ರಿ)ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 3.50 ಕೋಟಿ ರೂ. ಅನುದಾನದಲ್ಲಿ ಬಾಕಿ 1.50 ಕೋಟಿ ರೂ. ಹಣ ಬಿಡುಗಡೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಟ್ರಸ್ಟ್​ನ ವ್ಯವಸ್ಥಾಪಕ ಟ್ರಸ್ಟೀ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೂರ್ಣಾನಂದಪುರಿ ಮಹಾಸ್ವಾಮೀಜಿ (ಬಿ.ಜೆ. ಪುಟ್ಟಸ್ವಾಮಿ) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಿತು.

ಅರ್ಜಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಸಚಿವರನ್ನು ಪ್ರತಿವಾದಿಯನ್ನಾಗಿ ಮಾಡುವ ಅವಶ್ಯಕತೆ ಏನಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು.

ಸದ್ಯ ಕಡತ ಅವರ ಬಳಿಯಿದ್ದು, ಅದನ್ನು ಅವರು ಇಲಾಖೆಯ ಕಾರ್ಯದರ್ಶಿಗೆ ಕಳಿಸಬೇಕಾಗಿದೆ. ಅದಕ್ಕಾಗಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗಿದೆ. ನ್ಯಾಯಾಲಯ ಹೇಳಿದರೆ ಅವರನ್ನು ಪ್ರತಿವಾದಿ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಇದಕ್ಕೆ ಪೀಠ ಸಚಿವರ ಹೆಸರು ಪಟ್ಟಿಯಿಂದ ತೆಗೆಯುವಂತೆ ನ್ಯಾಯಪೀಠ ಸೂಚನೆ ನೀಡಿತು.

ಪ್ರಕರಣದ ಹಿನ್ನೆಲೆ: ವಿಶ್ವ ಗಾಣಿಗರ ಸಮುದಾಯವು ಚಾರಿಟಬಲ್ ಟ್ರಸ್ಟ್‌ಗೆ ರಾಜ್ಯ ಸರ್ಕಾರ ಕಳೆದ ಬಜೆಟ್‌ನ್‌ನಲ್ಲಿ 3.50 ಕೋಟಿ ರು. ಅನುದಾನ ಘೋಷಣೆ ಮಾಡಲಾಗಿತ್ತು. ಮುಖ್ಯಮಂತ್ರಿಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ಸಹ ಕೊಟ್ಟಿತ್ತು. ಅದರಂತೆ 2023ರ ಜ.18ರಂದು 2 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಬಾಕಿ ಮೊತ್ತ 1.50 ಕೋಟಿ ರು. ಬಿಡುಗಡೆ ಮಾಡಲು 2023ರ ಜೂನ್​ 7ರಿಂದ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಮಾಡಲಾಗುತ್ತಿದೆ. ಆದರೆ, ಈವರೆಗೂ ಹಣ ಬಿಡುಗಡೆ ಮಾಡಿಲ್ಲ. 3.50 ಕೋಟಿ ಹಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಬಾಕಿ ಕಾಮಗಾರಿ ಪೂರ್ಣಗೊಳಿಸಲು ಹಣಬೇಕಿದೆ. ಆದ್ದರಿಂದ ಬಾಕಿ ಉಳಿಸಿಕೊಂಡಿರುವ 1.50 ಕೋಟಿ ರು. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸೂಚಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ: ಡೆಂಗ್ಯೂ ಹರಡಲು ಕಾರಣರಾಗುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೆ ಹೈಕೋರ್ಟ್ ಆದೇಶ

ಇದನ್ನೂ ಓದಿ: ಜನನ ಪ್ರಮಾಣ ಪತ್ರದಲ್ಲಿನ ಹೆಸರು ಬದಲಾವಣೆ ಕುರಿತು ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

ABOUT THE AUTHOR

...view details