ತುಮಕೂರು: ಗ್ಯಾಂಗ್ ರೇಪ್ ಪ್ರಕರಣದ ಇಬ್ಬರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ತುಮಕೂರಿನ ಎರಡನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಮಹಾಂತೇಶ್ ಮತ್ತು ಶ್ರೀನಿವಾಸ್ ಶಿಕ್ಷೆಗೊಳಗಾದವರು. ಇಬ್ಬರು ಆರೋಪಿಗಳಿಗೆ ತಲಾ 10 ವರ್ಷ ಜೈಲು ಶಿಕ್ಷೆ ಮತ್ತು ತಲಾ 1,62,000 ರೂ. ದಂಡ ವಿಧಿಸಿ ನ್ಯಾಯಾಲದ ನ್ಯಾಯಾಧೀಶರಾದ ಹೆಚ್. ಅನಂತ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ನಿರ್ಭಯಾ ಕೇಸ್‌ಗೂ ಮೂರು ತಿಂಗಳ ಮೊದಲು 9/07/2012 ರಂದು ಸಂಭವಿಸಿದ್ದ ಗ್ಯಾಂಗ್ ರೇಪ್ ಪ್ರಕರಣ ಇದಾಗಿದ್ದು, ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ಮಾಡಿದ್ದ ಆರೋಪಿಗಳ ಕುರಿತು ಶಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಹಿನ್ನೆಲೆ:ಮಹಾಂತೇಶ್ ಮತ್ತು ಶ್ರೀನಿವಾಸ್ ಯುವತಿಯರಿಗೆ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರವೆಸಗಿದ್ದರು. ಮೂವರು ಗೆಳತಿಯರ ಪೈಕಿ ಇಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಅತ್ಯಾಚಾರ ಮಾಡಿ ವಿಡಿಯೋ ಸಹ ಸೆರೆಹಿಡಿದಿದ್ದರು.
ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ಓರ್ವ ಯುವತಿ ಶಿರಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಳು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇನ್ಸ್ಪೆಕ್ಟರ್ ಎಸ್. ಕೆ. ಪ್ರಹ್ಲಾದ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಗ್ಯಾಂಗ್ ರೇಪ್ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಪೀಠ, ಇಬ್ಬರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ತಲಾ 1,62,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರಿ ಅಭಿಯೋಜಕಿ ವಿ. ಎ. ಕವಿತ ವಾದ ಮಂಡನೆ ಮಾಡಿದ್ದರು.
ಇದನ್ನೂ ಓದಿ:ಅಪ್ರಾಪ್ತೆಯ ಅತ್ಯಾಚಾರಗೈದು ಗರ್ಭಪಾತ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, ₹50 ಸಾವಿರ ದಂಡ