ಬೆಂಗಳೂರು: ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್. ಡಿ ರೇವಣ್ಣ ಕೂಡಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಹೆಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಇಬ್ಬರಿಗೂ ಅಂದೇ ಲುಕ್‌ಔಟ್ ನೋಟಿಸ್ ಕೊಟ್ಟಿದ್ದೇವೆ. ರೇವಣ್ಣ ಸಹ ಹೋರ ದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ. ರೇವಣ್ಣ ವಿಚಾರಣೆಗೆ ಹಾಜರಾಗದಿರುವ ಬಗ್ಗೆ ಪ್ರತಿಕ್ರಿಯಿಸಿ, ಇಂದು (ಶನಿವಾರ) ಸಂಜೆಯವರೆಗೆ ಸಮಯ ಇದೆ. ಅದಕ್ಕಾಗಿಯೇ ಎರಡು ನೋಟಿಸ್ ಕೊಟ್ಟಿದ್ದೇವೆ. ಮೈಸೂರು ಕಿಡ್ನಾಪ್ ಕೇಸ್ಗೂ ರೇವಣ್ಣ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಿಡ್ನಾಪ್ ಕೇಸ್ನಲ್ಲಿ ಓರ್ವನ ಬಂಧನ ಆಗಿದೆ. ಆಗ್ತಾನೆ ಇರುತ್ತದೆ, ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಲು ಆಗಲ್ಲ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ರೇವಣ್ಣನಿಗೆ ಈಗಾಗಲೇ ಎರಡು ನೋಟಿಸ್ ಕೊಟ್ಟಿದ್ದಾರೆ. ತನಿಖೆಗೆ ಹಾಜರಾಗಲು 24 ಗಂಟೆಗಳ ಸಮಯ ನೀಡಲಾಗಿದೆ. ಇಂದು ವಿಚಾರಣೆಗೆ ಹಾಜರಾಗುತ್ತಾರೋ? ಇಲ್ಲವೋ? ಎಂದು ಆಮೇಲೆ ನೋಡೋಣ. ನಂತರ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನೋಡೋಣ. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಬರಲೇಬೇಕು. ಇಂದಲ್ಲ, ನಾಳೆ ನಾಡಿದ್ದು ವಿಚಾರಣೆಗೆ ಬರಲೇಬೇಕು. ಅಗತ್ಯ ಬಿದ್ದರೆ ಬಂಧನವನ್ನೂ ಮಾಡುತ್ತೇವೆ ಎಂದು ತಿಳಿಸಿದರು.