ಕಲಬುರಗಿ: ಕಡು ಬಡತನದಲ್ಲಿ ಹುಟ್ಟಿ ಬೆಳೆದ ಯುವಕ ವಿಜಯಕುಮಾರ್ ಪ್ರಸನ್ನ, ಸುಂದರ ಬದುಕು ಕಟ್ಟಿಕೊಳ್ಳಬೇಕೆಂದು ಕುವೈತ್ಗೆ ಪ್ರಯಾಣ ಬೆಳೆಸಿದ್ದರು. ಕಳೆದ ಹತ್ತು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಶನಿವಾರ ಕುಟುಂಬಸ್ಥರು ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದರು.
ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲೀಗ ದುಃಖದ ವಾತಾವರಣ ಮನೆ ಮಾಡಿದೆ. ಕುವೈತ್ನ ಮಂಗಾಫ್ ಪ್ರದೇಶದ ಬೃಹತ್ ಬಹುಮಹಡಿ ಕಟ್ಟಡದ ಆರನೇ ಅಂತಸ್ತಿನಲ್ಲಿ ನಡೆದ ಅಗ್ನಿ ಅವಘಡದಲ್ಲಿ 47ಕ್ಕೂ ಹೆಚ್ಚು ಭಾರತೀಯರು ಸಜೀವ ದಹನವಾಗಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ್ ಪ್ರಸನ್ನ (40) ಕೂಡ ಕೊನೆಯುಸಿರೆಳೆದಿದ್ದರು.
ವಿಜಯಕುಮಾರ್ ಕಳೆದ ಹತ್ತು ವರ್ಷಗಳಿಂದ ಕುವೈತ್ನಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬಡತನದಲ್ಲಿ ಬೆಳೆದಿದ್ದ ಇವರಿಗೆ ಒಂದು ಹೆಣ್ಣು, ಇಬ್ಬರು ಗಂಡು ಸೇರಿ ಮೂವರು ಮಕ್ಕಳಿದ್ದಾರೆ. ತಾನು ಬಡತನದಲ್ಲಿ ಹುಟ್ಟಿದರೂ ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉಜ್ವಲ ಭವಿಷ್ಯ ರೂಪಿಸಬೇಕೆಂಬ ಕನಸು ಹೊಂದಿದ್ದರು. ಕಳೆದೊಂದು ವರ್ಷದ ಹಿಂದೆ ಸ್ವಗ್ರಾಮಕ್ಕೆ ಬಂದು ಹೋಗಿದ್ದ ವಿಜಯಕುಮಾರ್, ಎರಡು ವರ್ಷಗಳಲ್ಲಿ ವಾಪಸ್ ಬಂದು ಇಲ್ಲೇ ಕೆಲಸ ಮಾಡುವುದಾಗಿ ಮನೆಯವರಿಗೆ ತಿಳಿಸಿದ್ದರಂತೆ. ಆದರೆ ಇದೀಗ ಮನೆಗೆ ಬಂದಿದ್ದು ಅವರ ಮೃತದೇಹ. ಕುವೈತ್ನಿಂದ ಕೊಚ್ಚಿ, ಕೊಚ್ಚಿಯಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾರ್ಥಿವ ಶರೀರ, ಶನಿವಾರ ಬೆಳಗ್ಗೆ ರಸ್ತೆಮಾರ್ಗದ ಮೂಲಕ ಸರಸಂಬಾ ಗ್ರಾಮ ತಲುಪಿತು. ಮನೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.