ಕರ್ನಾಟಕ

karnataka

ETV Bharat / state

ಇಂದಿನಿಂದ ಧಾರವಾಡದಲ್ಲಿ ಕೃಷಿ ಮೇಳ; ರೈತರ ಜಾತ್ರೆಯಲ್ಲಿ ಬಗೆಬಗೆಯ ಮಳಿಗೆಗಳ ದರ್ಬಾರ್ - Krishi Mela 2024 - KRISHI MELA 2024

ಇಂದಿನಿಂದ ನಾಲ್ಕು ದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ನಡೆಯಲಿದ್ದು, ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ವಿವಿ ಕುಲಪತಿಗಳು ತಿಳಿಸಿದ್ದಾರೆ.

KRISHI MELA 2024
ಧಾರವಾಡದ ಕೃಷಿ ವಿಶ್ವವಿದ್ಯಾಲಯ (ETV Bharat)

By ETV Bharat Karnataka Team

Published : Sep 21, 2024, 1:10 PM IST

ಧಾರವಾಡ: ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಹೆಸರಿನ ಘೋಷವಾಕ್ಯದಲ್ಲಿ ರೈತರ ಜಾತ್ರೆ ಎನಿಸಿರುವ ಧಾರವಾಡ ಕೃಷಿ ಮೇಳ ಇಂದಿನಿಂದ (ಸೆ.21 ರಿಂದ 24ರ ವರೆಗೆ) ನಾಲ್ಕು ದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಸಲಾಗುತ್ತಿದೆ.

ಕೃಷಿ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ. ಆದರೆ, ಸದ್ಯಕ್ಕೆ ಪ್ರವಾಸ ಪಟ್ಟಿ ಖಚಿತವಾಗಿಲ್ಲ. ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಮುಖ್ಯ ಸಚೇತಕ ಸಲೀಂ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ಉಪಸ್ಥಿತಿ ವಹಿಸಲಿದ್ದಾರೆ. ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಿದ್ದಾರೆ‌. ಉಳಿದಂತೆ ಹಲವಾರು ಅತಿಥಿಗಳು ಭಾಹವಹಿಸಲಿದ್ದಾರೆ.

ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ (ETV Bharat)

ನಾಲ್ಕು ದಿನಗಳ‌ ಕಾಲ ನಡೆಯುವ ಈ ಮೇಳದಲ್ಲಿ ಬೀಜ ಮೇಳ, ಫಲಪುಷ್ಪ ಮೇಳ, ಮತ್ಸ್ಯಮೇಳ, ಜಾನುವಾರು ಮೇಳ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿಯ ಹೊಸ ಆವಿಷ್ಕಾರಗಳು, ಅಂತರ್ಜಲ ಮರುಪೂರಣ ಸೇರಿದಂತೆ ಹಲವು ಕೃಷಿ ಚಟುಚಟಿಕೆಗಳ ಮಾಹಿತಿಯನ್ನು ರೈತರು ಪಡೆದುಕೊಳ್ಳಬಹುದು.

ಕೃಷಿ ವಸ್ತು ಪ್ರದರ್ಶನದಲ್ಲಿ 150 ಹೈಟೆಕ್ ಮಳಿಗೆ, 214 ಸಾಮಾನ್ಯ ಮಳಿಗೆ, 110 ಯಂತ್ರೋಪಕರಣ ಮಳಿಗೆ, 27 ಟ್ರ್ಯಾಕ್ಟರ್ ಸೇರಿದಂತೆ ಭಾರೀ ಯಂತ್ರೋಪಕರಣಗಳ ಮಳಿಗೆ ಹಾಗೂ 28 ಆಹಾರ ಮಳಿಗೆಗಳು ಬುಕ್ ಆಗಿವೆ ಎಂದು ಕೃಷಿ ವಿವಿ ಕುಲಪತಿಗಳು ತಿಳಿಸಿದ್ದಾರೆ.

ಸಂಗಮೇಶ ಅಸಮಾಧಾನ:ಇಂದಿನಿಂದ ಆರಂಭಗೊಂಡಿರುವ ಮೇಳಕ್ಕೆ ಕೆಲವರಿಗೆ ಅಧಿಕೃತ ಆಹ್ವಾನ ನೀಡಿಲ್ಲವೆಂದು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿ ವಿವಿ ಕುಲಪತಿ ದುರಂಹಕಾರಿಯಾಗಿದ್ದಾರೆ. ಕುಲಸಚಿವರ ಹೆಸರೇ ಶಿಷ್ಟಾಚಾರಕ್ಕೆ ಒಳಪಡುವುದಿಲ್ಲವೆಂಬ ಉಡಾಫೆ ಉತ್ತರ ನೀಡಿದ್ದರು. ಅವರು ಪ್ರತಿಕ್ರಿಯೆ ನೀಡೋ ರೀತಿಯಲ್ಲೇ ಅವರ ವ್ಯಕ್ತಿತ್ವ ಗೊತ್ತಾಗುತ್ತದೆ. ನಾನು ಸಾತ್ವಿಕ, ಆಕ್ರೋಶ ವ್ಯಕ್ತಪಡಿಸಿದ್ದೇನೆ. ಇಂತಹ ದುರಂಹಕಾರಿ ಕುಲಪತಿ ಜೊತೆಗೆ ನಾನು ವೇದಿಕೆ ಹಂಚಿಕೊಳ್ಳಲಾರೆ. ಕೃಷಿ ಮೇಳ ನೋಡುತ್ತೇನೆ, ನೋಡಿ ಕಣ್ತುಂಬಿಕೊಳ್ಳುವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕುಲಪತಿಯ ದುರಂಹಕಾರದ ತಿಪ್ಪೆಯನ್ನು ನಾನು ತಲೆಯಿಂದ ತೆಗೆದು ಇಡುತ್ತೇನೆ. ಇಂತಹ ದುರಂಹಕಾರಿ ಹಿಂದೊಮ್ಮೆ ರಾಜ್ಯಪಾಲರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆಗಲೂ ಸಹ ಸರ್ವಾಧಿಕಾರಿಯಂತೆ ವರ್ತನೆ ತೋರಿದ್ದರು. ಆದರೆ, ಅವರೊಬ್ಬರು ಹಿರಿಯರು ಅಂತಾ ಸುಮ್ಮನೆ ಇದ್ದೆ. ಈಗ ಕೃಷಿ ಮೇಳಕ್ಕೆ ಅಧಿಕೃತ ಆಹ್ವಾನ ನೀಡಿಲ್ಲ. ಈ ಬಗ್ಗೆ ರಾಜ್ಯಪಾಲರಿಗೆ ನಾನು ಪತ್ರ ಬರೆದಿದ್ದೇನೆ. ರಾಜ್ಯಪಾಲರಿಗೆ ಅರಿಕೆ ಮಾಡಿಕೊಡುತ್ತೇವೆ. ಕುಲಪತಿ, ಸಂವಿಧಾನದತ್ತ ಹುದ್ದೆಯಲ್ಲಿರುವವರು. ಸರ್ಕಾರದ ಪ್ರತಿನಿಧಿಗಳೊಂದಿಗೆ ಹೇಗೆ ವರ್ತಿಸಬೇಕೆಂಬ ಕುರಿತು ಕಾರ್ಯಾಗಾರ ಮಾಡಿ ಎಂದು ಹೇಳುವೆ. ರಾಜ ಭವನಕ್ಕೆ ಕುಲಪತಿ ಕರೆಯಿಸಿ ತಿಳುವಳಿಕೆ ನೀಡುವಂತೆ ಕೇಳಿಕೊಳ್ಳುವೆ ಎಂದರು.

ಇದನ್ನೂ ಓದಿ: ವಿಜಯಪುರದಲ್ಲಿ ಕೃಷಿ ಮೇಳ: ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಕರೆ

ABOUT THE AUTHOR

...view details