ಬೆಂಗಳೂರು:ಡೆಂಗ್ಯೂ ಅನ್ನು ಗಂಭೀರವಾಗಿ ಪರಿಗಣಿಸಿ ನೋಟಿಫೈ ಡಿಸೀಜ್ ಎಂದು ಘೋಷಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರವೇ ದರ ನಿಗದಿಪಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಬದಲು ಡಿ.ಎಸ್ ಅರುಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಕಳೆದ ಬಾರಿ 25 ಸಾವಿರ ಇದ್ದರೆ ಈ ಬಾರಿ 60 ಸಾವಿರ ದಾಟಿದೆ, ಡೆಂಗ್ಯೂ ಅನ್ನು ನೋಟಿಫೈ ಡಿಸೀಜ್ ಎಂದು ಘೋಷಿಸಿದ್ದೇವೆ ಎಂದರು.
ಡೆಂಗ್ಯೂ ಪ್ರಕರಣದ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಮಾಡುತ್ತಿಲ್ಲ, ಗಂಭೀರವಾಗಿ ಪರಿಗಣಿಸಿದ್ದೇವೆ. ಕೋವಿಡ್ ರೀತಿ ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ. ಒಂದೇ ಏರಿಯಾದಲ್ಲಿ ಎರಡು ಡೆಂಗ್ಯೂ ಕಂಡರೆ ಆ ಪ್ರದೇಶದಲ್ಲಿ ಫೀವರ್ ಕ್ಲಿನಿಕ್ ಆರಂಭಿಸಲಿದ್ದೇವೆ. ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ. ಎಲ್ಲಾ ಜಿಲ್ಲೆಗಳಲ್ಲಿಯೂ ಪರೀಕ್ಷೆ ಸರಿಯಾಗಿ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಉಚಿತ ಚಿಕಿತ್ಸೆ, ಪರೀಕ್ಷೆ ಇದ್ದು, ಖಾಸಗಿಯಲ್ಲಿ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆ ಆರೋಪಿಗಳ ವಿರುದ್ಧ ಪಿಸಿಪಿಎನ್‌ಡಿಟಿ(PCPNDT) ಕೇಸ್:ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪಿಸಿಪಿಎನ್‌ಡಿಟಿ (PCPNDT) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ. ಉತ್ತಮ ವಕೀಲರ ನಿಯೋಜನೆ ಮೂಲಕ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಮತ್ತು ಬಿಜೆಪಿ ಸದಸ್ಯ ಸಿಟಿ ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಎಲ್ಲ ಕ್ರಮ ವಹಿಸಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲ ರೀತಿಯ ಅಗತ್ಯ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಹಿಡಿಯಬೇಕಿದ್ದು, ಆ ಕೆಲಸ ಮಾಡುತ್ತಿದ್ದೇವೆ ಎಂದರು.
ಇದಕ್ಕೆ ತೃಪ್ತರಾಗದ ಸದಸ್ಯ ಯುಬಿ ವೆಂಕಟೇಶ್, ಸರ್ಕಾರದ ಉತ್ತರ ಸರಿಯಾಗಿಯೇ ಇದೆ ಆದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶಿಕ್ಷೆ ಹೆಚ್ಚು ಮಾಡಿ ಭಯ ಹುಟ್ಟಿಸಿ ಮಟ್ಟ ಹಾಕಿ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ನಾವು ಕೇಸ್ ಹಾಕುತ್ತೇವೆ, ಕೋರ್ಟ್ನಲ್ಲಿ ಅವರಿಗೆ ಜಾಮೀನು ಸಿಗಲಿದೆ, ಜಾಮೀನು ಸಿಗಲು ಕಷ್ಟವಾಗುವ ಕಲಂ ಅಡಿಯಲ್ಲಿ ಕೇಸ್ ಹಾಕಬೇಕಿದೆ. ಪಿಸಿಪಿಎನ್‌ಡಿಟಿ (PCPNDT) ಕಾಯ್ದೆಯಡಿ ಕ್ರಮ ವಹಿಸಲಿದ್ದೇವೆ. ಆರೋಪಿಗಳನ್ನು ಹಿಡಿಯುವವರೆಗೂ ನಾವು ಗಟ್ಟಿಯಾಗಿರುತ್ತೇವೆ. ಆದರೆ ನಂತರ ಅವರು ಜಾಮೀನು ತರುತ್ತಾರೆ, ಇಲ್ಲಿ ನಾವು ಗಟ್ಟಿಯಾಗಬೇಕಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ. ಮೊದಲು ಪೊಲೀಸರು ಕೇಸ್ ಬುಕ್ ಮಾಡುತ್ತಿದ್ದರು ಆದರೆ ಈಗ ನಾವು ಆರೋಗ್ಯ ಇಲಾಖೆ ಸಕ್ಷಮ ಪ್ರಾಧಿಕಾರವಾಗಿದ್ದು ಅದರಿಂದ ದೂರು ಕೊಡಿಸಲಿದ್ದೇವೆ ಎಂದು ತಿಳಿಸಿದರು.
ಡಿಹೆಚ್ಒ ಮೂಲಕ ಕೇಸ್ ಬುಕ್ ಮಾಡುತ್ತೇವೆ. ಈಗಾಗಲೇ 23 ಆಸ್ಪತ್ರೆ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಮೈಸೂರಿನ ಮಾತಾ ಆಸ್ಪತ್ರೆ ಪರವಾನಗಿ ರದ್ದು ಮಾಡಿದ್ದೇವೆ. ಕೋರ್ಟ್ ಮುಖಾಂತರ ಪ್ರಕರಣಗಳು ತೀರ್ಮಾನವಾಗಲಿದೆ. ಫಾಲೋಅಪ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಒಳ್ಳೆಯ ವಕೀಲರ ನೇಮಕಕ್ಕೂ ಸೂಚಿಸಲಾಗಿದೆ. ಭ್ರೂಣ ಹತ್ಯೆ ಕೊಲೆಗೆ ಸಮಾನ ಎನ್ನುವ ಕುರಿತು ಕಾನೂನು ತರಲು ಹಿಂದೆ ಚಿಂತನೆ ಇತ್ತು, ಈಗ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ ಎಂದರು.
ಪಶು ಔಷಧ ಮನುಷ್ಯರಿಗೆ ನೀಡಲ್ಲ:ಪಶುಗಳಿಗೆ ನೀಡಿವ ಔಷಧವನ್ನು ಮನುಷ್ಯರಿಗೆ ನೀಡಲ್ಲ. ಔಷಧಗಳ ಲೇಬಲ್ ದೋಷದಿಂದಾಗಿ ಆ ಔಷಧ ವಾಪಸ್ ಕಳಿಸಲಾಗಿದೆಯೇ ಹೊರತು ಔಷಧಿಯಲ್ಲಿ ಯಾವುದೇ ಲೋಪವಿರಲಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶುಗಳಿಗೆ ಕೊಡುವ ಔಷಧ ನಾವು ಜನರಿಗೆ ಕೊಟ್ಟಿಲ್ಲ, ಸರಬರಾಜುದಾರರು ಲೋಗೋಗ್ರಾಂನಲ್ಲಿ ಎ.ಹೆಚ್.ಡಿ.ಹೆಚ್ ಇಲಾಖೆ ಎಂದು ಬಂದಿದೆ. ಇದನ್ನು ಕೂಡಲೇ ಏಳು ಪ್ರಯೋಗಾಲಯಕ್ಕೆ ಕಳಿಸಿ ಪರಿಶೀಲಿಸಲಾಗಿದ್ದು, ಔಷಧದಲ್ಲಿ ಸಮಸ್ಯೆ ಕಂಡುಬಂದಿಲ್ಲ. ಲೇಬಲ್ ಸಮಸ್ಯೆ ಅಷ್ಟೆ, ಆದರೂ ದಂಡ ಹಾಕಿ ಮರು ಪೂರೈಕೆಗೆ ಸೂಚಿಸಲಾಗಿದೆ. ಮನುಷ್ಯರಿಗೆ ಕೊಡುವ ಔಷಧವೇ ಅದು, ನಾವು ಕೂಡ ಮನುಷ್ಯರಲ್ಲವೇ ಮನುಷ್ಯರಿಗೆ ಪಶುಗಳ ಔಷಧಿ ಕೊಡುತ್ತೇವಾ? ಯಾವ ಕಾರಣಕ್ಕೂ ಪಶು ಔಷಧಿ ನಮ್ಮ ಜನರಿಗೆ ಕೊಟ್ಟಿಲ್ಲ, ಲೇಬಲ್ ಕಾರಣಕ್ಕೆ ವಾಪಸ್ ಕಳಿಸಲಾಗಿದೆ. ಔಷಧದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇದನ್ನೂ ಓದಿ:ಮುಂಗಾರು ಅಧಿವೇಶನ: ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ