ಹುಬ್ಬಳ್ಳಿ: ಸ್ಮಾರ್ಟ್ ಸಿಟಿಯ ಮಹತ್ವದ ಯೋಜನೆ ಪಬ್ಲಿಕ್ ಬೈಸಿಕಲ್ ಸಿಸ್ಟಮ್ 'ಸವಾರಿ' ಅವಳಿ ನಗರದಲ್ಲಿ ಆರಂಭವಾಗಿ ಎರಡೂ ವರ್ಷವಾದ್ರೂ ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅಂತೆಯೇ ಸೈಕಲ್ ಯೋಜನೆಗೆ ವ್ಯಾಪಕ ಪ್ರಚಾರ ನೀಡಿ, ಜನ ಸ್ನೇಹಿಯಾಗಿಸುವ ಪ್ರಯತ್ನ ಮಾಡಲಾಗುತ್ತಿದೆ.
ಹೌದು, ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಚಾಲನೆಯಲ್ಲಿರುವ 'ಸವಾರಿ' ಪಬ್ಲಿಕ್ ಬೈಸಿಕಲ್ ಸಿಸ್ಟಮ್ ಬಳಕೆದಾರರನ್ನು ಆಕರ್ಷಿಸಲು ಹೊಸ ವರ್ಷಕ್ಕೆ 'ಉಚಿತ' ಸವಾರಿ ಯೋಜನೆ ಮಾಡಲಾಗಿದೆ. ಅಂದರೆ ಬೈಸಿಕಲ್ ಬಳಕೆದಾರರು ಆರಂಭದ ಒಂದು ತಾಸು ಉಚಿತವಾಗಿ ಸೈಕಲ್ ಸವಾರಿ ಮಾಡಬಹುದು. ಇದು ಜ.1ರಿಂದಲೇ ಜಾರಿಯಾಗಿದೆ.
ಉಚಿತ ಸವಾರಿ : ಸವಾರಿ ಯೋಜನೆ 3ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೈಕಲ್ನತ್ತ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಂದು ತಾಸು ಉಚಿತ ರೈಡ್ ಕೊಡುವ ಆಫರ್ ನೀಡಲಾಗಿದೆ. ಇದರಿಂದ ಹೆಚ್ಚಿನ ಹೊಸ ಬೈಸಿಕಲ್ ಬಳಕೆದಾರರು ನೋಂದಣಿ ಮಾಡಿಸುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ವಿವಿಧ ಪ್ರಚಾರ ಕಾರ್ಯಕ್ರಮಗಳನ್ನು ಮಾಡಿದ್ದು, ಈಗ ಇನ್ನೂ ಹೆಚ್ಚಿನ ಜನರನ್ನು ಆಕರ್ಷಿಸಲು ಪ್ರಯತ್ನ ಮಾಡಲಾಗುತ್ತಿದೆ.
ಸೈಕಲ್ ಸವಾರಿ ಗಂಟೆಗೆ 5 ರೂ. :ಈ ಕುರಿತಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ನಗರದ ವಿವಿಧ ಸ್ಥಳಗಳಲ್ಲಿ 34 ಬೈಸಿಕಲ್ ನಿಲ್ದಾಣಗಳನ್ನು ಮಾಡಿದ್ದು, 340 ಬೈಸಿಕಲ್‌ಗಳಿವೆ. ಒಂದು ಸೈಕಲ್ಗೆ ಒಂದು ತಾಸಿಗೆ 5 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಆದ್ರೆ ಅಷ್ಟೊಂದು ಸ್ಪಂದನೆ ಸಾರ್ವಜನಿಕರಿಂದ ಸಿಗುತ್ತಿಲ್ಲ. ಹೀಗಾಗಿ ಸಾರ್ವಜನಿಕರನ್ನು ಸೆಳೆಯುವ ದೃಷ್ಟಿಯಿಂದ ಬಳಕೆದಾರರಿಗೆ ಒಂದು ತಾಸು ಉಚಿತ ರೈಡ್ಗೆ ಅವಕಾಶ ನೀಡಲಾಗುತ್ತಿದೆ. ಇದು ಪ್ರೋತ್ಸಾಹದಾಯಕ ನಡೆಯಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಿಕೊಳ್ಳಲಿ ಎಂಬ ಸದುದ್ದೇಶ ಹೊಂದಲಾಗಿದೆ. ನಗರದಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿರುವುದರಿಂದ ಸೈಕಲ್ ಬಳಕೆಗೆ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಈಗ ಪ್ರಾರಂಭ ಮಾಡಿದ್ದರಿಂದ ಸ್ಪಂದನೆ ಸಿಗುತ್ತಿದೆ ಎಂದು ಮಾಹಿತಿ ನೀಡಿದರು.