ಕರ್ನಾಟಕ

karnataka

ETV Bharat / state

ಅನಾಥ ಜೀವಗಳಿಗೆ ವಿಮಾನದಲ್ಲಿ ಉಚಿತ ಮುಂಬೈ ಪ್ರವಾಸ : ಹೊಸ ಇತಿಹಾಸಕ್ಕೆ ಶಾಂತಾಯಿ ವೃದ್ಧಾಶ್ರಮ ಮುನ್ನುಡಿ - ತಾಜ್ ಹೊಟೇಲ್‌

ಬೆಳಗಾವಿ ಶಾಂತಾಯಿ ವೃದ್ಧಾಶ್ರಮದಿಂದ ಹಿರಿಯ ಜೀವಗಳಿಗೆ ಬೆಳಗಾವಿಯಿಂದ ಮುಂಬೈಗೆ ಉಚಿತವಾಗಿ ವಿಮಾನ ಪ್ರವಾಸ ಏರ್ಪಡಿಸುವ ಮೂಲಕ ಅಪರೂಪದ ಪ್ರಯತ್ನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶಾಂತಾಯಿ ವೃದ್ದಾಶ್ರಮ
ಶಾಂತಾಯಿ ವೃದ್ದಾಶ್ರಮ

By ETV Bharat Karnataka Team

Published : Feb 20, 2024, 8:18 PM IST

ವೃದ್ಧಾಶ್ರಮದ ಕಾರ್ಯಾಧ್ಯಕ್ಷ ವಿಜಯ ಮೋರೆ

ಬೆಳಗಾವಿ : ವಿಮಾನದಲ್ಲಿ ಹಾರಾಡಬೇಕು ಅಂತ ಯಾರಿಗೆ ತಾನೆ ಆಸೆ ಇರೋದಿಲ್ಲ ಹೇಳಿ. ಆದರೆ ಸಾಮಾನ್ಯರು, ಬಡವರಿಗೆ ಅದು ಅಸಾಧ್ಯವಾದ ಮಾತು. ಇನ್ನು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದವರಿಗಂತೂ ದೂರದ ಗುಡ್ಡ. ಹೀಗೊಂದು ಸುವರ್ಣಾವಕಾಶವನ್ನು ಅನಾಥ, ಹಿರಿಯ ಜೀವಿಗಳಿಗೆ ಉಚಿತವಾಗಿ ಕಲ್ಪಿಸುವ ಮೂಲಕ ಈ ವೃದ್ಧಾಶ್ರಮ ಹೊಸ ಇತಿಹಾಸ ಬರೆಯಲು ಮುಂದಡಿ ಇಟ್ಟಿದೆ.

ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮ ಹೀಗೊಂದು ಅಪರೂಪದ ಪ್ರಯತ್ನಕ್ಕೆ ಮುಂದಾಗಿದೆ‌. ಇಲ್ಲಿನ ಅಜ್ಜ, ಅಜ್ಜಿಯರಿಗೆ ಮನರಂಜನೆ ನೀಡುವ ಉದ್ದೇಶದಿಂದ ಫೆ. 22 ರಂದು ಬೆಳಗಾವಿಯಿಂದ ಮುಂಬೈಗೆ ಉಚಿತವಾಗಿ ವಿಮಾನ ಪ್ರವಾಸದ ವ್ಯವಸ್ಥೆ ಮಾಡಲಾಗಿದೆ.

ವೃದ್ಧ ಗುರುರಾಜ ಅಣ್ಣಿಗೇರಿ

ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ವೃದ್ಧಾಶ್ರಮದ ಕಾರ್ಯಾಧ್ಯಕ್ಷ, ಮಾಜಿ ಮೇಯರ್ ವಿಜಯ ಮೋರೆ, ಶಾಂತಾಯಿ ವೃದ್ಧಾಶ್ರಮದ 24 ಅಜ್ಜಿಯಂದಿರು-ನಾಲ್ವರು ಅಜ್ಜಂದಿರು, ಆಶ್ರಮದ ಸಿಬ್ಬಂದಿ, ಆಡಳಿತ ಮಂಡಳಿ ನಿರ್ದೇಶಕರು ಸೇರಿ ಒಟ್ಟು 42 ಜನ ಸ್ಟಾರ್ ಏರ್‌ವೇಸ್‌ನಲ್ಲಿ ಮುಂಬೈಗೆ ಹೋಗುತ್ತಿದ್ದೇವೆ. ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಇವರನ್ನು ತಾಜ್ ಹೋಟೆಲ್​ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಸಂಜೆಯ ತಿಂಡಿ-ಚಹಾ ಸೇವನೆ ಮಾಡಿದ ನಂತರ, ಸಮುದ್ರ ದಂಡೆಯ ಮೇಲೆ ವಿಹರಿಸಲು ಕರೆದುಕೊಂಡು ಹೋಗಲಾಗುತ್ತದೆ.

ನಾಲ್ಕು ದಿ‌ನ ಮುಂಬೈನಲ್ಲಿರುವ ಈ ತಂಡ ಅಟಲ್ ಜೀ ಸೇತುವೆ, ಗೇಟ್ ವೇ, ಮಹಾಲಕ್ಷ್ಮಿ ಮಂದಿರ, ಜೈನಮಂದಿರ, ಅನಿಲ್ ಅಂಬಾನಿಯವರ ಫೌಂಟೇನ್ ಆಫ್ ಎಂಜಾಯ್‌ಮೆಂಟ್, ಸಮುದ್ರ ಸಫಾರಿ‌ ಹಾಗೂ ಭಾವು ಕದಂ ಅಭಿನಯದ ನಾಟಕ ವೀಕ್ಷಣೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದು ನಮ್ಮ ಬಹಳ ದಿನಗಳ ಕನಸಾಗಿತ್ತು ಎಂದು ವಿವರಿಸಿದರು.

ವೃದ್ಧೆ ಸುಧಾ ದೇಶಪಾಂಡೆ

ದಾನಿಗಳ ಸಹಕಾರ : ಉದ್ಯಮಿಗಳಾದ ಅನಿಲ್ ಜೈನ್, ಸಂಜಯ್ ಗೋಡಾವತ್ ಅವರು ಈ ತಂಡದ ಪ್ರಯಾಣ, ಊಟ ಮತ್ತು ವಸತಿ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿದ್ದಾರೆ. 42 ಜನರ ಈ ತಂಡ 4 ದಿನ ಮುಂಬೈನಲ್ಲಿ ಕಾಲ ಕಳೆಯಲಿದೆ. ಈಗಾಗಲೇ ಶಾಂತಾಯಿ ವೃದ್ಧಾಶ್ರಮದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು, ಮುಂಬೈಗೆ ತೆರಳಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ವೃದ್ಧೆ ಸುಧಾ ದೇಶಪಾಂಡೆ ಮಾತನಾಡಿ, ಇದೇ ಮೊದಲ ಬಾರಿ ವಿಮಾನದಲ್ಲಿ ಹೋಗುತ್ತಿದ್ದೇನೆ. ಅದರಲ್ಲೂ ಎಲ್ಲರ ಜೊತೆಗೆ ಮುಂಬೈಗೆ ಹೋಗ್ತಿರೋದು ಸಂತಸ ಹೆಚ್ಚಿಸಿದೆ. ವಿಜಯ್ ಮೋರೆ ಮತ್ತು ಅವರ ಪತ್ನಿ ಹಿಂದಿನ ಜನ್ಮದಲ್ಲಿ ನನ್ನ ತಂದೆ ತಾಯಿ ಆಗಿದ್ದರು ಅಂತಾ ಕಾಣಿಸುತ್ತೆ. ಈ ಜನ್ಮದಲ್ಲೂ ನಮ್ಮನ್ನು ತಂದೆ ತಾಯಿಯಂತೆ ಏನೂ ಕಡಿಮೆ ಆಗದಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದರು.

ವೃದ್ಧ ಗುರುರಾಜ ಅಣ್ಣಿಗೇರಿ ಮಾತನಾಡಿ, 'ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು' ಎಂಬ ಬಿಎಂಶ್ರೀ ಅವರ ಹಾಡಿನ ಸಾಲು ನೆನಪಿಸಿಕೊಂಡ ಅವರು, ನಮ್ಮನ್ನು ಅತ್ಯಂತ ಪ್ರೀತಿಯಿಂದ ವಿಜಯ್ ಮೋರೆ ಸಾಕಿ ಸಲಹುತ್ತಿದ್ದಾರೆ. ಇದೇ ಮೊದಲ ಸಲ ಮುಂಬೈಗೆ ವಿಮಾನದಲ್ಲಿ ಹೋಗಲು ತುಂಬಾ ಉತ್ಸುಕರಾಗಿದ್ದೇವೆ. ಅಲ್ಲಿ ಹೋಗಿ ಬಂದ ಬಳಿಕ ನಿಮ್ಮ ಮುಂದೆ ಅನುಭವ‌‌ ಹಂಚಿಕೊಳ್ಳುತ್ತೇವೆ ಎಂದು ತಿಳಿಸಿದರು.

ಬೆಳಗಾವಿ ಪುನೀತ್​ ರಾಜ್​ಕುಮಾರ್​ ವಿಜಯ ಮೋರೆ: "ರಾಜಕುಮಾರ" ಸಿನಿಮಾದಲ್ಲಿ ಅನಾಥಾಶ್ರಮದಲ್ಲಿದ್ದ ವೃದ್ಧೆಯರನ್ನು ದಿ. ಕರ್ನಾಟಕ ರತ್ನ ಡಾ. ಪುನೀತ್​ರಾಜ್​ಕುಮಾರ್​ ಪ್ರೀತಿಯಿಂದ ನೋಡಿಕೊಂಡಿದ್ದರು. ಅಲ್ಲದೇ ನಿಜ ಜೀವನದಲ್ಲೂ ಅದೆಷ್ಟೋ ಅನಾಥ ಜೀವಿಗಳಿಗೆ ಬೆಳಕಾಗಿ, ಮನೆ ಮಾತಾಗಿದ್ದರು. ಅದೇ ಮಾದರಿಯಲ್ಲಿ ವಿಜಯ್ ಮೋರೆ ಶಾಂತಾಯಿ ವೃದ್ಧಾಶ್ರಮ ನಡೆಸುತ್ತಿದ್ದಾರೆ.

ಇಲ್ಲಿರುವ 40 ಹಿರಿಯ ಜೀವಿಗಳನ್ನು ಸ್ವಂತ ತಂದೆ ತಾಯಿಗಳಂತೆ ನೋಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಊಟ, ಉಪಹಾರ, ವಸತಿ, ಮನರಂಜನೆಗೆ ಟಿವಿ ಸೇರಿ ಯಾವುದೇ ಕೊರತೆ ಇಲ್ಲಿಲ್ಲ. ವಿಜಯ ಮೋರೆ ಅವರ ಮಹತ್ಕಾರ್ಯಕ್ಕೆ ಪತ್ನಿ ಮಾರಿಯಾ, ಪುತ್ರ ಅಲನ್ ಬೆನ್ನೆಲುಬಾಗಿ ನಿಂತಿದ್ದಾರೆ. ಬೆಳಗಾವಿ ಹೊರ ವಲಯದ 2 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ವೃದ್ಧಾಶ್ರಮದಲ್ಲಿ ಹಚ್ಚ ಹಸಿರಿನ ಗಿಡಮರಗಳ ಮಧ್ಯೆ ಮೋರೆ ಕುಟುಂಬದ ಪ್ರೀತಿಯ ಕಾಳಜಿ, ದಾನಿಗಳ ಸಹಕಾರದಿಂದ ವೃದ್ಧರು ಸ್ವಚ್ಛಂಧವಾಗಿ, ಆರಾಮಾಗಿ ಇಳಿ ವಯಸ್ಸನ್ನು ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳದ ಅದೆಷ್ಟೋ ಮಕ್ಕಳ ನಡುವೆ ಅನಾಥರಿಗೆ ಬೆಳಕಾಗಿರುವ ವಿಜಯ್ ಮೋರೆ ಅವರ ಕಾರ್ಯ ಸಮಾಜಕ್ಕೆ ಮಾದರಿ ಮತ್ತು ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ :ಅನಾಥರ ಬಾಳಿನ ಆಶಾಕಿರಣ.. ಹಿಂದುಳಿದ ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡುತ್ತಿದೆ ಈ ಶಾಲೆ

ABOUT THE AUTHOR

...view details