ಮೈಸೂರು:'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ಗಾದೆ ಮಾತು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ. ಅದೇ ರೀತಿ ಮಹಿಳೆಯೊಬ್ಬಳು ದುಡಿದರೆ ಮನೆಯೊಂದು ಸುಸೂತ್ರವಾಗಿ ನಡೆಯುತ್ತದೆ ಎಂಬುದು ಈಗಿನ ಮಾತು. ಆದ್ದರಿಂದ, ಆಧುನಿಕ ಯುಗದಲ್ಲಿ ಮಹಿಳೆಯೂ ದುಡಿಯಬೇಕಾದ ಅನಿರ್ವಾಯತೆ ಇದೆ. ಇದಕ್ಕೆ ಪೂರಕವಾಗಿ ಮೈಸೂರಿನಲ್ಲಿ ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನೆ ತರಬೇತಿ ನೀಡಿ 'ಸ್ವಾವಲಂಬಿ ಸ್ತ್ರೀ'ಯನ್ನಾಗಿಸುವ ವಿನೂತನ ಕಾರ್ಯಕ್ರಮ ನಡೆಯಿತು.
ದೇಶದ ಪ್ರತಿಷ್ಠಿತ ಸೈಕಲ್ ಬ್ರ್ಯಾಂಡ್ ಗ್ರೂಪ್ನ ಎನ್.ಆರ್.ಪ್ರತಿಷ್ಠಾನ ಹಾಗೂ ಹಲವು ಸಂಸ್ಥೆಗಳು ಹಾಗು ಮೈಸೂರಿನ ಎನ್.ಆರ್.ಸಮುದಾಯ ಅಭಿವೃದ್ದಿ ಕೇಂದ್ರದ ಸಹಯೋಗದೊಂದಿಗೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಆಟೋ ರಿಕ್ಷಾ ತರಬೇತಿ ಹಾಗೂ ಬದುಕಿಗೆ ಬೇಕಾದ ಇತರ ಮೌಲ್ಯಗಳ ಬಗ್ಗೆ ತರಬೇತಿ ನೀಡುವ ಮೊದಲ 'ಸ್ವಾವಲಂಬಿ ಸ್ತ್ರೀ' ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಉಚಿತವಾಗಿ 11 ಮಹಿಳೆಯರಿಗೆ ಆಟೋ ಚಾಲನೆ ತರಬೇತಿ ನೀಡಲಾಗಿದೆ.
ಆಟೋ ತರಬೇತಿ ಪಡೆದ ಮಂಜುಳ ಮಾತನಾಡಿ, ''ಫೇಸ್ಬುಕ್ನಲ್ಲಿ ಜಾಹೀರಾತು ನೋಡಿ ಫೋನ್ ಮಾಡಿದೆ. ನನ್ನ ಪತಿ ಕಾರಣಾಂತರದಿಂದ ಮರಣ ಹೊಂದಿದ್ದಾರೆ. ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಮೂರುವರೆ ತಿಂಗಳಿನಿಂದ ಆಟೋ ಚಾಲನೆ, ಲೈಸನ್ಸ್ ಪಡೆಯುವುದು, ಕೌಶಲ್ಯ ತರಬೇತಿ, ಇಂಗ್ಲಿಷ್ ಸಂವಹನ ತರಬೇತಿಗಳನ್ನು ನೀಡಿದ್ದಾರೆ. ಪತಿ ಮಾಡಿದ ವೃತ್ತಿಯನ್ನೇ ನಾನೂ ಆಯ್ಕೆ ಮಾಡಿಕೊಂಡಿದ್ದೇನೆ. ಈ ತರಬೇತಿಯಲ್ಲಿ ಹೇಗೆ ದುಡಿಯಬೇಕು, ಹಣ ಉಳಿಸುವುದು ಹೇಗೆ, ಜೀವನ ಸಾಗಿಸುವುದು ಹೇಗೆ? ಎಂಬುದರ ಬಗ್ಗೆ ಎನ್.ಆರ್.ಫೌಂಡೇಷನ್ ಕಲಿಸಿಕೊಟ್ಟಿದೆ. ಜೀವನದಲ್ಲಿ ಕಷ್ಟ ಇರುವ ಹೆಣ್ಣಮಕ್ಕಳು ಯಾರು ಬೇಕಾದರೂ ಆಟೋ ಓಡಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು. ಅದಕ್ಕೆ ಧೈರ್ಯ ಬೇಕು. ನನ್ನಲ್ಲಿ ದೃಢ ನಿರ್ಧಾರವಿದೆ'' ಎಂದು ಹೇಳಿದರು.