ಹುಬ್ಬಳ್ಳಿ:ನಗರದ ನಿವೃತ್ತ ವೈದ್ಯಕೀಯ ದಾಖಲೆ ಅಧಿಕಾರಿಯೊಬ್ಬರಿಗೆ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ವಾಟ್ಸ್ಆ್ಯಪ್ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದಿರಿಸಿ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೇಶ್ವಾಪುರ ವಿನಯ ಕಾಲೋನಿಯ ಮೋಹನರಾಜ್ ಕೋರಿಶೆಟ್ಟಿ ಎಂಬುವರೆ ಮೋಸಗೊಂಡವರು. ಇವರಿಗೆ ಡಿ.3ರಂದು ಅಪರಿಚಿತನು ವಾಟ್ಸ್ಆ್ಯಪ್ ವಿಡಿಯೋ ಕರೆ ಮಾಡಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು, ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಿವೆ. ಮುಂಬೈ ಕೋರ್ಟ್‌ನಲ್ಲಿ ಪಿಎಂಎಲ್ಎ (ಪಬ್ಲಿಕ್ ಮನಿ ಲಾಂಡರಿಂಗ್ ಆ್ಯಕ್ಟ್) ಕೇಸ್ ಆಗಿದೆ. ಬಂಧನ ವಾರಂಟ್ ಜಾರಿ ಮಾಡಲಾಗಿದೆ. ನಿಮ್ಮನ್ನು ಎಲ್ಲಿ ಯಾವಾಗ ಬೇಕಾದರೂ ಬಂಧಿಸಬಹುದು ಎಂದು ಭಯಪಡಿಸಿದ್ದಾರೆ.
ಅಲ್ಲದೆ, ಬಂಧನ ವಾರಂಟ್ ತಡೆಹಿಡಿಯಲು, ಕೇಸ್ ತನಿಖೆಗೊಳಪಡಿಸಲು ಹೇಳಿದ ಖಾತೆಗಳಿಗೆ ಹಣ ವರ್ಗಾಯಿಸಬೇಕು. ಈ ಬಗ್ಗೆ ಯಾರೊಂದಿಗೂ ಚರ್ಚಿಸಬಾರದು. ಸದಾ ವಿಡಿಯೋ ಕರೆಯಲ್ಲೇ ಇರಬೇಕು. ಕಡಿತ ಮಾಡಬಾರರು. ಗಂಟೆಗೊಮ್ಮೆ ನಿಮ್ಮ ಎಲ್ಲ ಚಟುವಟಿಕೆಗಳ ವರದಿ ನೀಡುತ್ತಿರಬೇಕು ಎಂದು ಹೇಳಿ ಡಿ.6 ರಿಂದ 12ರವರೆಗೆ ಹಂತ ಹಂತವಾಗಿ ಆರ್ಟಿಜಿಎಸ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತಂತೆ ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರಿಗೆ 6.48 ಲಕ್ಷ ರೂ. ಆನ್ ಲೈನ್ ವಂಚನೆ:ಮತ್ತೊಂದೆಡೆ, ಕೇಶ್ವಾಪುರ ಶಬರಿನಗರದ ವೈದ್ಯರೊಬ್ಬರಿಗೆ ಅನಾಮಧೇಯರು ಹೆಚ್ಚಿನ ಟಾಸ್ಕ್‌ಗಳನ್ನು ಪೂರೈಸಲು ಹಣ ಜಮಾ ಮಾಡಬೇಕೆಂದು ಹೇಳಿ, ಆನ್‌ಲೈನ್ ಮೂಲಕ 6.48 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಡಾ. ಕಲ್ಲಪ್ಪ ನವಲಗುಂದ ಎಂಬುವರ ಟೆಲಿಗ್ರಾಮ್ ಗ್ರೂಪ್ಗೆ ಮೀನಾಕ್ಷಿ ಎಂಬ ಅಪರಿಚಿತರು ಪಾರ್ಟ್‌ಟೈಮ್ ಜಾಬ್ ಸಂದೇಶ ಕಳುಹಿಸಿ, ವೈದ್ಯರ ಹೆಸರಲ್ಲಿ ಐಡಿ ಸೃಷ್ಟಿಸಿ ಕಂಪನಿಯೊಂದರ ಉತ್ಪನ್ನಗಳ ರಿವ್ಯೂವ್ ಮಾಡಿಸಿದ್ದಾರೆ. ಮೊದಲು ವೈದ್ಯರ ಖಾತೆಗೆ 800 ರೂ. ವರ್ಗಾಯಿಸಿ, ನಂತರ ಹೆಚ್ಚಿನ ಟಾಸ್ಕ್ ಗಳನ್ನು ಪೂರೈಸಲು ಹಣ ಹಾಕಬೇಕೆಂದು ಹಂತ ಹಂತವಾಗಿ ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಿಜಯನಗರ: 9 ತೊಲೆ ಚಿನ್ನ ಕಳೆದುಕೊಂಡು ಮಹಿಳೆ ಗೋಳಾಟ; 80 ಪ್ರಯಾಣಿಕರಿದ್ದ ಬಸ್ ಪೊಲೀಸ್ ಠಾಣೆಗೆ ದೌಡು