ಕರ್ನಾಟಕ

karnataka

ETV Bharat / state

ಜ್ಯುವೆಲರಿ ಶಾಪ್ ಮಾಲೀಕನಿಗೆ ವಂಚನೆ ಆರೋಪ: ಆರೋಪಿ ಶ್ವೇತಾ ಗೌಡ ವಿರುದ್ಧ ಮತ್ತೊಂದು ಎಫ್ಐಆರ್ - FIR ON SHWETA GOWDA

ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿ ಜ್ಯುವೆಲರಿ ಶಾಪ್ ಮಾಲೀಕ ಬಾಲರಾಜ್ ಶೇಟ್ ನೀಡಿರುವ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಶ್ವೇತಾ ಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

Accused woman Shwetha Gowda
ಆರೋಪಿ ಮಹಿಳೆ ಶ್ವೇತಾ ಗೌಡ (ETV Bharat)

By ETV Bharat Karnataka Team

Published : Dec 29, 2024, 12:58 PM IST

ಬೆಂಗಳೂರು: ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ನಂಬಿಸಿ ಜ್ಯುವೆಲರಿ ಶಾಪ್ ಮಾಲೀಕನಿಗೆ ವಂಚಿಸಿದ ಆರೋಪದಡಿ ಬಂಧನವಾಗಿರುವ ಶ್ವೇತಾ ಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿ ಜ್ಯವೆಲರಿ ಶಾಪ್ ಮಾಲೀಕರಿಂದ 20.75 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಆರೋಪ ಶ್ವೇತಾ ಗೌಡ ವಿರುದ್ಧ ಕೇಳಿಬಂದಿದೆ. ಮಾಲೀಕ ಬಾಲರಾಜ್ ಶೇಟ್ ಎಂಬುವರು ನೀಡಿದ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ‌.

ಆರೋಪವೇನು? ಬೆಂಗಳೂರಿನಲ್ಲಿ ವಂಚನೆಗೊಳಗಾದ ಜ್ಯುವೆಲರಿ ಶಾಪ್ ಮಾಲೀಕ ಸಂಜಯ್ ಬಾಫ್ನಾ ಮೂಲಕ 6 ತಿಂಗಳ ಹಿಂದೆ ಬಾಲರಾಜ್ ಶೇಟ್‌ಗೆ ಶ್ವೇತಾ ಗೌಡ ಪರಿಚಯವಾಗಿದ್ದರು. "ನಾನು ಸಂಜಯ್ ಬಳಿ ಕೋಟಿಗಟ್ಟಲೆ ವ್ಯವಹಾರ ಹೊಂದಿದ್ದೇನೆ. ಹಳೆಯ ಆ್ಯಂಟಿಕ್ ಜ್ಯುವೆಲರಿ ಹಾಗೂ ವಜ್ರದ ಆಭರಣಗಳನ್ನು ಖರೀದಿ ಮಾಡುತ್ತೇನೆ. ನೀವು 250 ಗ್ರಾಂ ತೂಕದ ಆ್ಯಂಟಿಕ್ ಆಭರಣಗಳನ್ನು ತಯಾರು ಮಾಡಿಕೊಡಿ" ಎಂದು ಬಾಲರಾಜ್ ಶೇಟ್‌ಗೆ ಕೇಳಿದ್ದರು. ಆ ಬಳಿಕ ಯಾವುದೇ ರೀತಿ ಆಭರಣಕ್ಕಾಗಿ ಸಂಪರ್ಕಿಸದಿದ್ದರಿಂದ ಬಾಲರಾಜ್ ಶೇಟ್‌ ಸಹ ಸುಮ್ಮನಾಗಿದ್ದರು. ಆದರೆ ಡಿಸೆಂಬರ್ 11ರಂದು ಬಾಲರಾಜ್ ಶೇಟ್ ಅವರು 285 ಗ್ರಾಂ ತೂಕದ ಹಳೆಯ ಒಡವೆಗಳ ವ್ಯಾಪಾರಕ್ಕಾಗಿ ತಮ್ಮ ಸಹೋದರ ನಾಗರಾಜ್ ಅವರನ್ನು ಬೆಂಗಳೂರಿಗೆ ಕಳಿಸಿದ್ದರು. ಬೆಂಗಳೂರಿನಲ್ಲಿ ವ್ಯಾಪಾರಿ ಸಿಗದಿದ್ದರಿಂದ, ತಾವು ಮಾರಾಟಕ್ಕೆಂದು‌ ಕಳುಹಿಸಿದ್ದ ಒಡವೆಗಳ ಫೋಟೋಗಳನ್ನು ಶ್ವೇತಾ ಗೌಡಗೆ ವಾಟ್ಸ್ಯಾಪ್‌ನಲ್ಲಿ ಕಳುಹಿಸಿದ್ದರು. ತಕ್ಷಣ ರಿಪ್ಲೈ ಮಾಡಿದ್ದ ಶ್ವೇತಾ ಗೌಡ, "ಈ ಆಭರಣಗಳನ್ನು ನಾನೇ ಖರೀದಿಸುತ್ತೇನೆ'' ಎಂದಿದ್ದರು. ಅದರಂತೆ ಬಾಲರಾಜ್ ಅವರ ಸಹೋದರ ಹಾಗೂ ಶ್ವೇತಾ ಗೌಡ ಯು. ಬಿ. ಸಿಟಿ ಸಮೀಪದ ಕಾಫಿ ಡೇನಲ್ಲಿ ಭೇಟಿಯಾಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರ ಬಾಲರಾಜ್​ ಶೇಟ್​ (ETV Bharat)

ಆ ಸಂದರ್ಭದಲ್ಲಿ ಆಭರಣಗಳನ್ನು ಪಡೆದಿದ್ದ ಶ್ವೇತಾ ಗೌಡ, 5 ಲಕ್ಷದ 2 ಚೆಕ್‌ಗಳು ಹಾಗೂ 6 ಲಕ್ಷದ 1 ಚೆಕ್ ನೀಡಿ ಬಾಕಿ 4.75 ಲಕ್ಷವನ್ನು ಮನೆಗೆ ಹೋಗಿ ಆರ್‌ಟಿಜಿಎಸ್ ಮಾಡುವುದಾಗಿ ಹೇಳಿದ್ದರು. ಆದರೆ ಡಿಸೆಂಬರ್ 13ರಂದು ಬ್ಯಾಂಕ್‌ನಲ್ಲಿ ಚೆಕ್ ಹಾಜರುಪಡಿಸಿದಾಗ ಅವು ಅಮಾನ್ಯವೆಂದು ತಿಳಿದು ಬಂದಿದೆ. ಉಳಿದ 4.75 ಲಕ್ಷ ಹಣವನ್ನೂ ಸಹ ಆರ್‌ಟಿಜಿಎಸ್ ಮಾಡದ ಶ್ವೇತಾ ಗೌಡಗೆ ಕರೆ ಮಾಡಿ ವಿಚಾರಿಸಿದಾಗ "ಬ್ಯಾಂಕ್‌ನಲ್ಲಿ ಏನೋ ಸಮಸ್ಯೆಯಾಗಿದೆ" ಎಂದು ಹೇಳಿದ್ದರು. ನಂತರ ಶ್ವೇತಾ ಗೌಡ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನ ಬಂತು. ಸಂಜಯ್ ಬಾಫ್ನಾಗೆ ಕರೆ ಮಾಡಿದಾಗ,‌ ವಂಚನೆ ಪ್ರಕರಣದಲ್ಲಿ ಬಂಧನವಾಗಿರುವುದು ತಿಳಿದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಬಾಲರಾಜ್​ ಶೇಟ್​.

ಬಾಲರಾಜ್ ಶೇಟ್ ನೀಡಿರುವ ದೂರಿನನ್ವಯ ಸದ್ಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಶ್ವೇತಾ ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ:ಮಾಜಿ ಸಚಿವರ ಆಪ್ತೆ ಎಂದು ಚಿನ್ನ ಖರೀದಿ ನೆಪದಲ್ಲಿ ವಂಚನೆ: ಆರೋಪಿ ಮಹಿಳೆ ಬಂಧನ

ABOUT THE AUTHOR

...view details