ಉಡುಪಿ: ಮುಂಬೈ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ (53) ಹಣ ಕಳೆದುಕೊಂಡವರು. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ಜು.29ರಂದು ಡಾ.ಅರುಣ್ ಕುಮಾರ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ತಾನು ಕಸ್ಟಮ್ಸ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾನೆ. ಬಳಿಕ, ನಿಮ್ಮ ಆಧಾರ್ ಸಂಖ್ಯೆ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200 ಗ್ರಾಂ ಎಂಡಿಎಂಎ ಹಾಗೂ 5,000 ಯುಎಸ್ ಡಾಲರ್ ಇದ್ದು, ಕೊರಿಯರ್ ಮುಂಬೈ ಕಸ್ಟಮ್ಸ್ ವಶದಲ್ಲಿರುವುದಾಗಿ ತಿಳಿಸಿದ್ದಾನೆ.
ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್‌ಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರು ಸ್ವೀಕರಿಸಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದು, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದರು.