ಮಂಗಳೂರು:ಮತೀಯ ದ್ವೇಷದಿಂದ ದಾರಿ ಕೇಳುವ ನೆಪದಲ್ಲಿ ರಿಕ್ಷಾವನ್ನು ಅಡ್ಡಗಟ್ಟಿ ಪ್ರಯಾಣಿಕರೊಬ್ಬರ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಬಂಟ್ವಾಳ ಮಂಚಿ ನಿವಾಸಿ ವಿಜೇತ್ ಕುಮಾರ್ (22), ಬಡಗ ಉಳಿಪ್ಪಾಡಿ ನಿವಾಸಿ ಕಿರಣ್ ಪೂಜಾರಿ (24), ವಾಮಂಜೂರು ತಿರುವೈಲ್ ನಿವಾಸಿ ಅನೀಶ್ (23), ಮಂಚಿಗುತ್ತು ನಿವಾಸಿ ಅಭಿಜಿತ್ (24) ಶಿಕ್ಷೆಗೊಳಗಾದ ಅಪರಾಧಿಗಳು. ನಾಸಿರ್ ಎಂಬುವರ ಕೊಲೆ ಮಾಡಲಾಗಿತ್ತು.
2015ರ ಆ.6ರಂದು ಮುಹಮ್ಮದ್ ಮುಸ್ತಫಾ ಅವರು ತನ್ನ ಅತ್ತೆಯನ್ನು ರಿಕ್ಷಾದಲ್ಲಿ ಬಂಟ್ವಾಳ ಆಸ್ಪತ್ರೆಗೆ ಬಿಟ್ಟು ರಾತ್ರಿ ಹಿಂತಿರುಗುತ್ತಿದ್ದರು. ಬಳಿಕ ಮೆಲ್ಕಾರ್ ಸಮೀಪ ನಾಸಿರ್ ತನ್ನ ಪತ್ನಿಯ ಜೊತೆ ರಿಕ್ಷಾವನ್ನೇರಿ ಮುಡಿಪು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ 2 ಬೈಕ್‌ನಲ್ಲಿ ನಾಲ್ವರು ಬಂದಿದ್ದು, ರಿಕ್ಷಾದವರಲ್ಲಿ ಬೊಳ್ಳಾಯಿಗೆ ಹೋಗುವ ರಸ್ತೆ ಕುರಿತು ವಿಚಾರಿಸಿದ್ದಾರೆ. ದಾರಿ ತೋರಿಸಿ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಿದಾಗ ಆರೋಪಿಗಳು ವಾಹನವನ್ನು ಹಿಂಬಾಲಿಸಿದ್ದರು.
ರಾತ್ರಿ 10.45ರ ವೇಳೆ ಮುಡಿಪು ಮಾರ್ನಬೈಲು ಸಮೀಪದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪಿದಾಗ ಆಟೋರಿಕ್ಷಾವನ್ನು ಓವರ್ ಟೇಕ್ ಮಾಡಿ ನಿಲ್ಲಿಸಿದ್ದರು. ಮತ್ತೆ ದಾರಿ ಕೇಳುವ ನೆಪದಲ್ಲಿ ಆರೋಪಿ ವಿಜೇತ್ ಕುಮಾರ್ ತಲವಾರಿನಿಂದ ನಾಸಿರ್ ಮೇಲೆ ಹಲ್ಲೆ ನಡೆಸಿ, ತೀವ್ರ ಗಾಯಗೊಳಿಸಿದ್ದ. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ, ಆ.7ರಂದು ಮೃತಪಟ್ಟಿದ್ದರು. ನಾಲ್ವರು ಆರೋಪಿಗಳು ಕೃತ್ಯವೆಸಗಿದ ಸಂದರ್ಭ ಹಾಕಿದ್ದ ಬಟ್ಟೆಯನ್ನು ರಕ್ತ ಕಲೆಗಳಿದ್ದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಗೆ ಎಸೆದು ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿದ್ದರು.