ಬೆಳಗಾವಿ: 50 ಲಕ್ಷ ರೂ. ಇನ್ಶೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮನೋರ್ವ ಕೊಲೆಗೈದಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಳಿ ನಡೆದಿದೆ. ಪ್ರಕರಣದ ಬಳಿಕ ಊರು ಬಿಟ್ಟಿದ್ದ ಆರೋಪಿಗಳು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹಣಮಂತ ಗೋಪಾಲ ತಳವಾರ (35) ಕೊಲೆಯಾದ ವ್ಯಕ್ತಿ. ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನ ಹತ್ಯೆಗೈದ ಆರೋಪಿಯಾಗಿದ್ದಾನೆ. ಹಣಮಂತ ತನ್ನ ಹೆಸರಲ್ಲಿ ಬಸವರಾಜ 50 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ, ಅಲ್ಲದೇ ಆ ಇನ್ಶೂರೆನ್ಸ್ಗೆ ನಾಮಿನಿ ಕೂಡ ತಾನೇ ಆಗಿದ್ದ. ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಆತನನ್ನೇ ಹತ್ಯೆ ಮಾಡಲು ಬಸವರಾಜ ಸಂಚು ರೂಪಿಸಿದ್ದ. ಅಕ್ಟೋಬರ್ 7ರಂದು ಕಂಠಪೂರ್ತಿ ಕುಡಿಸಿ ತನ್ನ ಗ್ಯಾಂಗ್ನೊಂದಿಗೆ ಅಣ್ಣನನ್ನು ಶ್ರೀಗಂಧದ ಕಟ್ಟಿಗೆಗಳಿವೆ, ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ಹಣಮಂತನ ತಲೆಗೆ ರಾಡ್ನಿಂದ ಹೊಡೆದು ಆರೋಪಿಗಳು ಕೊಲೆ ಮಾಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.