ಬೆಂಗಳೂರು:ಚಾರಿಟಬಲ್ ಟ್ರಸ್ಟ್‌ಗಳಿಗೆ ಕೋಟ್ಯಂತರ ರೂಪಾಯಿ ಸಿಎಸ್‌ಆರ್ ದೇಣಿಗೆ ಕೊಡಿಸುವ ನೆಪದಲ್ಲಿ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕಾಂಚೀಪುರಂ ಪಳ್ಳಿ ಕರಣೈ ನಿವಾಸಿ ಸುನಿತಾ, ಜಯಕುಮಾರ, ಉತ್ತರಹಳ್ಳಿಯ ಜತೀನ್ ಅಗರ್ವಾಲ್ ಮತ್ತು ಗುಜರಾತ್ ಮೂಲದ ರಾಜೇಂದ್ರ ಹೆಗ್ಡೆ ಬಂಧಿತ ಆರೋಪಿಗಳು.
ಬಂಧಿತರಿಂದ ನಕಲಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ. ಇವರು ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಆದಿತ್ಯಾ ಬಿರ್ಲಾ, ಅಲ್ಟ್ರಾ ಟೆಕ್, ಮಹೀಂದ್ರ ಸಸ್ಟೇನ್ ಪ್ರೈ.ಲಿ. ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಬಳಿಕ ಆರೋಪಿಗಳೇ ತಮ್ಮನ್ನು ಎಕ್ಸಿಕ್ಯೂಟೀವ್ ಮ್ಯಾನೇಜರ್, ಕಂಪನಿಯ ಪ್ರತಿನಿಧಿಗಳು ಎಂದು ಬಿಂಬಿಸಿಕೊಂಡು ಚಾರಿಟಬಲ್ ಟ್ರಸ್ಟ್‌ಗಳ ಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದರು.
ನಕಲಿ ದಾಖಲೆಗಳನ್ನು ತೋರಿಸಿ ನಂಬಿಸಿ ಕಲಂ 80(ಜಿ) ಆದಾಯ ತೆರಿಗೆ ಕಾಯ್ದೆಯ ಅನ್ವಯ ನಿಮ್ಮ ಟ್ರಸ್ಟ್‌ಗಳಿಗೆ ದೇಣಿಗೆ ನೀಡುತ್ತೇವೆ. ಇದರಿಂದ ಕಂಪನಿಗಳಿಗೆ ಆದಾಯ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗಲಿದೆ ಎಂದು ನಂಬಿಸುತ್ತಿದ್ದರು. ಸಿಎಸ್‌ಆರ್ ಫಂಡ್ ನೀಡಲು ಮೂಮೆಂಟ್ ಚಾರ್ಜ್ ಮತ್ತು ಪ್ರೊಸೆಸಿಂಗ್ ಚಾರ್ಜ್ ಕೊಡಬೇಕಾಗುತ್ತದೆ ಎಂದು ಹೇಳಿ 10 ರಿಂದ 15 ಲಕ್ಷ ರೂ. ಮತ್ತು ದಾಖಲೆ ಪತ್ರಗಳನ್ನು ಪಡೆಯುತ್ತಿದ್ದರು.
ಆನಂತರ ಟ್ರಸ್ಟ್ ಕಡೆಯಿಂದ ಸರಿಯಾದ ದಾಖಲೆ ಮತ್ತು ನಿಯಮ ಪಾಲನೆ ಮಾಡಿಲ್ಲ ಎಂದು ನೆಪ ಹೇಳಿ ಹಣ ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿರಸ್ಕರಿಸುತ್ತಿದ್ದರು. ಇದೇ ರೀತಿ ಮಾರ್ಚ್ 14ರಂದು ಶಂಕರಾನಂದ ಆಶ್ರಮ ಟ್ರಸ್ಟ್ ಪದಾಧಿಕಾರಿಗಳನ್ನು ಸಂಪರ್ಕ ಮಾಡಿದ ಆರೋಪಿಗಳು, ಎಕ್ಸ್‌ಪೆಂಡರ್ಸ್ ಇಂಟರ್‌ನ್ಯಾಷನಲ್ ಇಂಡಿಯಾ ಪ್ರೈ.ಲಿ. ಕಂಪನಿಯಿಂದ ಕೋಟ್ಯಂತರ ರೂ. ಸಿಎಸ್‌ಆರ್ ಫಂಡ್ ನೀಡುವುದಾಗಿ ನಂಬಿಸಿದ್ದರು.
ಟ್ರಸ್ಟ್ ಕಡೆಯಿಂದ 15 ಲಕ್ಷ ರೂ. ಮತ್ತು ದಾಖಲೆ ಪತ್ರಗಳನ್ನು ಪಡೆದು ಕೊನೆಗೆ ಕೆಲ ನಿಮಯಗಳನ್ನು ಪಾಲನೆ ಮಾಡಿಲ್ಲ. ನಿಮಗೆ ನೀಡಬೇಕಾಗಿದ್ದ ಸಿಎಸ್‌ಆರ್ ಫಂಡ್ ಕೊಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿದ್ದರು. ಗಾಬರಿಗೊಂಡ ಆಶ್ರಮದ ವಕೀಲರು, ಹಣ ವಾಪಸ್ ಕೊಡುವಂತೆ ಕೇಳಿದಾಗ ಆರೋಪಿಗಳು ಹಲ್ಲೆ ನಡೆಸಿ, ನಿಂದಿಸಿದ್ದರು. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಆಶ್ರಮದ ಕಡೆಯಿಂದ ದೂರು ದಾಖಲಿಸಲಾಗಿತ್ತು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ಓದಿರುವ ಸುನಿತಾ, ಎಕ್ಸ್‌ಪೆಂಡರ್ಸ್ ಕಂಪನಿ ಮಾಲಕಿ ಎಂದು ಬಿಂಬಿಸಿಕೊಂಡಿದ್ದಳು. ಶಂಕರಾನಂದ ಆಶ್ರಮಕ್ಕೆ ಕೋಟ್ಯಂತರ ರೂ. ಸಿಎಸ್‌ಆರ್ ಫಂಡ್ ಕೊಡುವುದಾಗಿ ಹೇಳಿ 2ನೇ ವರ್ಷದ ಇಂಜಿನಿಯರ್ ವಿದ್ಯಾರ್ಥಿ ಜತೀನ್ ಅಗರ್ವಾಲ್, ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಆರ್‌ಟಿಜಿಎಸ್ ಮಾಡಿದ್ದಳು. ಇದಾದ ಮೇಲೆ ಎಲೆಕ್ಟ್ರಿಕಲ್ ಇಂಜಿನಿಯರ್ ಜಯಕುಮಾರ್, ಈ ಹಣವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದರು.
ಇದನ್ನೂ ಓದಿ:ಬೆಂಗಳೂರು: ಬಿಜೆಪಿ ನಾಯಕನಿಗೆ ಹನಿಟ್ರ್ಯಾಪ್, ಆರೋಪಿಗಳ ವಿರುದ್ಧ ಪ್ರಕರಣ ದಾಖಲು - Honeytrap Case