ಚಿಕ್ಕಬಳ್ಳಾಪುರ:ಮೋದಿ ಪ್ರಧಾನಿಯಾದರೆ ದೇವೇಗೌಡರು ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ರು, ಆದರೆ ಈಗ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಬಿಜೆಪಿ ವಕ್ತಾರರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಚಿಂತಾಮಣಿ ನಗರದಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ ಕಾರ್ಯಕ್ರಮ ಸೇರಿದಂತೆ ಕೋಲಾರ ಮಿಲ್ಕ್ ಯೂನಿಯನ್ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಚಿಂತಾಮಣಿಯಲ್ಲಿ ಇಂದು ಉದ್ಘಾಟನೆಯನ್ನು ಬಹಳಷ್ಟು ಸಂತೋಷದಿಂದ ಮಾಡುತ್ತಿದ್ದೇನೆ. ಶಾಸಕ ಸುಧಾಕರ್ ಬಹಳ ಕ್ರಿಯಾಶೀಲ ಮಂತ್ರಿ, ಜನಪರ ಕಾಳಜಿ ಹೊಂದಿದ್ದಾರೆ. ಸಚಿವರಾಗಿ ಉತ್ತಮ ರೀತಿ ಕೆಲಸ ಮಾಡುತ್ತಿದ್ದಾರೆ. ನೀವೆಲ್ಲಾ ಕೂಡ ಕ್ರಿಯಾಶೀಲ ಜನಪರ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ, ಅವರಿಗೆ ರಾಜಕೀಯದಲ್ಲಿ ಇನ್ನೂ ಮುಂದಿನ ದಿನಗಳಲ್ಲಿ ಭವಿಷ್ಯ ಇದೆ ಎಂದು ಅಭಿಪ್ರಾಯ ತಿಳಿಸಿದರು.
ಯಾವ ಜನಪ್ರತಿನಿಧಿಗಳಿಗೆ ರಾಜ್ಯದ ಬಗ್ಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾರಿಗೆ ಕಾಳಜಿ ಇರುತ್ತೋ, ಅವರು ರಾಜಕೀಯವಾಗಿ ಬೆಳೆಯಲು ಸಾಧ್ಯ, ಅವೆಲ್ಲ ಗುಣಗಳು ಎಂ ಸಿ ಸುಧಾಕರ್ ಪಡೆದಿದ್ದಾರೆ. ನಿಮಗೆಲ್ಲ ಗೊತ್ತಿದೆ ಚುನಾವಣೆ ಪೂರ್ವದಲ್ಲಿ ಅನೇಕ ಭರವಸೆ ಕೊಟ್ಟಿದ್ದೆವು. ಅವುಗಳಲ್ಲಿ ಪ್ರಮುಖವಾಗಿ 5 ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಕೊಡುವುದಾಗಿ ತಿಳಿಸಿದ್ದೆವು. ನುಡಿದಂತೆ ನಡೆದುಕೊಂಡಿದ್ದೇವೆ ಎಂದರು.
ಕೇಂದ್ರ ಸರ್ಕಾರ ನೀತಿಯಿಂದ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ರೈತರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಕಾರಣದಿಂದ ನಾನು ಮತ್ತು ಡಿಕೆಶಿಯವರು ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿ ಗ್ಯಾರಂಟಿ ಕಾರ್ಡ್ಗಳಿಗೆ ಸಹಿ ಮಾಡಿ ಕೊಟ್ಟಿದ್ದೆವು. ನಂತರ ಜನರ ಆಶೀರ್ವಾದದಿಂದ 136 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಅಲ್ಲಿಂದ ನೇರವಾಗಿ ವಿಧಾನಸೌಧದ ಕ್ಯಾಬಿನೆಟ್ನಲ್ಲಿ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಯಿತು ಎಂದು ತಿಳಿಸಿದರು.
ಗ್ಯಾರಂಟಿ ಘೋಷಣೆಗಳನ್ನು ಜಾರಿ ಮಾಡಿದರೆ ಕರ್ನಾಟಕ ಖಜಾನೆ ಖಾಲಿಯಾಗುತ್ತೆ ಎಂದು ಪ್ರತಿಪಕ್ಷದ ಬಿಜೆಪಿಯವರು ಅಪ ಪ್ರಚಾರ ಮಾಡಿದರು. ಗ್ಯಾರಂಟಿಗಳನ್ನು ಲೋಕಸಭೆ ಚುನಾವಣೆ ನಂತರ ಮೇಲೆ ನಿಲ್ಲಿಸುತ್ತಾರೆ ಎಂದ ಹೇಳಿಕೊಳ್ಳುತ್ತಿದ್ದಾರೆ. ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವುದು ಬದಲು ಅವರೇ ಮೂರ್ಖರಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.