ಕರ್ನಾಟಕ

karnataka

ETV Bharat / state

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ದೇವೇಗೌಡ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ - MANMOHAN SINGH PASSES AWAY

ಮಾಜಿ ಪ್ರಧಾನಮಂತ್ರಿ, ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಜ್ಯದ ನಾಯಕರು ಸಂತಾಪ ಸೂಚಿಸಿದ್ದಾರೆ.

ಮನಮೋಹನ್ ಸಿಂಗ್ ನಿಧನ
ಮನಮೋಹನ್ ಸಿಂಗ್ ನಿಧನ (ETV Bharat)

By ETV Bharat Karnataka Team

Published : Dec 26, 2024, 11:09 PM IST

ಬೆಂಗಳೂರು/ಬೆಳಗಾವಿ:ದೇಶದ ಮಾಜಿ ಪ್ರಧಾನಮಂತ್ರಿ, ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್​ ಡಿ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ನಾಯಕರು ಸಂತಾಪ ಸೂಚಿಸಿದ್ದಾರೆ.

ಇನ್ನು ಕಾಂಗ್ರೆಸ್ ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.

ಹೆಚ್​.ಡಿ.ದೇವೇಗೌಡ ಸಂತಾಪ:ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಗಿದೆ. ಅವರು ಒಳ್ಳೆಯ ಮತ್ತು ತಾಳ್ಮೆಯ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ ಮತ್ತು ನಾನು ಅತ್ಯಂತ ಗೌರವಿಸುವ ಸಹೋದ್ಯೋಗಿ. ಭಾರತದ ಆರ್ಥಿಕ ಭವಿಷ್ಯವನ್ನು ಬದಲಿಸಿದ ವ್ಯಕ್ತಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಕಂಬನಿ:ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಗಲಿಕೆಯಿಂದ ಅಪಾರ ದುಃಖವಾಗಿದೆ. ಅಪ್ರತಿಮ ಬುದ್ಧಿವಂತಿಕೆ, ಅವರ ನಾಯಕತ್ವ ಮತ್ತು ದೂರದೃಷ್ಟಿ ದೇಶದಲ್ಲಿ ಅಚ್ಚಳಿಯದೇ ಉಳಿದಿದೆ. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾನು ಮೊದಲ ಬಾರಿಗೆ ಕರ್ನಾಟಕದ ಸಿಎಂ ಆಗಿದ್ದೆ. ನಮ್ಮ ಬಜೆಟ್ ಕ್ರಮಗಳಿಗೆ ಅವರ ಪ್ರೋತ್ಸಾಹ ಮತ್ತು ಆಹಾರ ಹಕ್ಕು ಕಾಯಿದೆಯಂತಹ ಯುಪಿಎ ನೀತಿಗಳ ಪ್ರಭಾವವು ಕರ್ನಾಟಕದ ಪ್ರಗತಿಗೆ ಕಾರಣವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಪರಂಪರೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್​ ಖಾತೆಯಲ್ಲಿ ಕಂಬನಿ ಮಿಡಿದಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಸಂತಾಪ:ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತದ ಮಾಜಿ ಪ್ರಧಾನಮಂತ್ರಿಗಳು, ಪ್ರಖ್ಯಾತ ವಿತ್ತತಜ್ಞರು, ಆರ್ಥಿಕ ಸುಧಾರಣೆಗಳ ಹರಿಕಾರರೂ ಆಗಿದ್ದ ಡಾ.ಮನಮೋಹನ್ ಸಿಂಗ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ದೂರದೃಷ್ಟಿ, ಸಂಯಮ ಮತ್ತು ತಮ್ಮ ಆರ್ಥಿಕ ಮೇದಸ್ಸಿನಿಂದ ರಾಷ್ಟ್ರವನ್ನು ದುರಿತ ಕಾಲದಲ್ಲಿ ಸಶಕ್ತವಾಗಿ ಮುನ್ನಡೆಸಿದ್ದ ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಆರ್ಥಿಕ ಸುಧಾರಣೆಗಳ ಮೂಲಕ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು ಅವರು. ಅವರ ಕೊಡುಗೆಗಳು ಚಿರಸ್ಮರಣೀಯ ಎಂದಿರುವ ಕೇಂದ್ರ ಸಚಿವರು; ಸಿಂಗ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನ ಹೊಂದಿರುವ ಸುದ್ದಿಯು ಅತ್ಯಂತ ದುಃಖವನ್ನು ಉಂಟು ಮಾಡಿದೆ. ಆರ್ಥಿಕ ತಜ್ಞರಾಗಿ, ಪ್ರಧಾನ ಮಂತ್ರಿಯಾಗಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ಅವರ ಅಗಲಿಕೆಯು ದೇಶಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಬರೆದುಕೊಂಡಿದ್ದಾರೆ.

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಧಿವಶರಾದ ಸುದ್ದಿ ತೀವ್ರ ನೋವುಂಟು ಮಾಡಿದೆ. ಕೇಂದ್ರ ಹಣಕಾಸು ಸಚಿವರಾಗಿ, ಆರ್ ಬಿಐ ಗವರ್ನರ್ ಆಗಿ, ಆರ್ಥಿಕ ಸಲಹೆಗಾರರಾಗಿ, ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ, ಪ್ರಧಾನ ಮಂತ್ರಿಗಳಾಗಿ ಸುಮಾರು ಐದು ದಶಕಗಳ ಕಾಲ ಅನೇಕ ಹುದ್ದೆಗಳಲ್ಲಿ ರಾಷ್ಟ್ರ ಸೇವೆ ಸಲ್ಲಿಸಿದ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ದೇಶ ಒಬ್ಬ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸಂತಾಪ ಸೂಚಿಸಿದ್ದಾರೆ.

ಜಗತ್ತಿನ ಶ್ರೇಷ್ಠ ಆರ್ಥಿಕ‌ ತಜ್ಞ, ಮುತ್ಸದ್ದಿ ಪ್ರಧಾನಮಂತ್ರಿಯನ್ನು ಕಳೆದುಕೊಂಡು ಇಡೀ ಭಾರತ ದೇಶ ಬಡವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸಂತಾಪ ಸೂಚಿಸಿದರು. ಬೆಳಗಾವಿ ಪ್ರವಾಸಿ‌ ಮಂದಿರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಗತ್ತಿನ ಆರ್ಥಿಕ ನಾಯಕ, ಹಲವಾರು ರಾಷ್ಟ್ರಗಳಿಗೆ ಮಾರ್ಗದರ್ಶನ ನೀಡಿದ್ದರು. ದೇಶವನ್ನ ಅತ್ಯಂತ ಸಂಪದ್ಭರಿತ ಮಾಡಿದ್ದರು. ಮನಮೋಹನ್ ಸಿಂಗ್ ಅವರು ಅಧಿಕಾರ ವಹಿಸಿದಾಗ ಮಧ್ಯಮ ವರ್ಗದ ಕುಟುಂಬ 18 ಕೋಟಿ ಇತ್ತು. ಕೆಲವೇ ವರ್ಷಗಳಲ್ಲಿ 36 ಕೋಟಿ ಮಾಡುವುದರಲ್ಲಿ ಯಶಸ್ವಿಯಾದರು. ಅವರು ಜಾರಿಗೆ ತಂದ ಯೋಜನೆಗಳು ಭಾರತವನ್ನು ಐದನೇ ಸಂಪದ್ಭರಿತ ದೇಶ ಮಾಡಿತು ಎಂದು ಕೊಂಡಾಡಿದರು.

ಭಾರತದ ಆರ್ಥಿಕ ವ್ಯವಸ್ಥೆ ಸಿಂಗ್ ಅವರಿಗೆ ಸದಾ ಚಿರರುಣಿ ಆಗಿದೆ. ದೇಶದ ಆರ್ಥಿಕತೆ ಬದಲಾವಣೆಗೆ ಮನಮೋಹನ್ ಸಿಂಗ್ ಅವರದ್ದು ಬಹುದೊಡ್ಡ ಕೊಡುಗೆ ಇದೆ. ಬರಾಕ್‌ ಒಬಾಮಾ ಕೂಡ ಮನಮೋಹನ್ ಸಿಂಗ್ ಅವರ ನೀತಿ ಪ್ರೇರಣೆ ನೀಡಿವೆ ಅಂತಾ ಹೇಳಿ ಕೊಂಡಾಡಿದ್ದರು. ಭಾರತ ನಿಜವಾಗಿಯೂ ಅವರನ್ನು ಕಳೆದುಕೊಂಡು ಬಡವಾಗಿದೆ. ನಮ್ಮ ರಾಷ್ಟ್ರಕ್ಕೆ ಅವರ ಅಗಲಿಗೆ ದುಃಖ ಸಹಿಸುವ ಶಕ್ತಿ ಕೊಡಲಿ ಎಂದು‌ ಪ್ರಾರ್ಥಿಸಿದರು.

ಪ್ರತಿಭಟನೆ, ಪತ್ರಿಕಾಗೋಷ್ಠಿ ರದ್ದು:ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅವರು ನಿಧನರಾದ ಹಿನ್ನೆಲೆ ನಾಳೆ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆಯಬೇಕಿದ್ದ ಪತ್ರಿಕಾಗೋಷ್ಠಿ ಮತ್ತು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆಯಬೇಕಿದ್ದ ಪ್ರತಿಭಟನೆಯನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್​ ಸಿಂಗ್ ಇನ್ನಿಲ್ಲ; ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರಿಂದ ಕಂಬನಿ

ABOUT THE AUTHOR

...view details