ಬೆಂಗಳೂರು:ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, ಅವರ ಪುತ್ರ ಚೇತನ್ ಗೌಡ, ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಸೇರಿದಂತೆ ಕೆಲ ಮುಖಂಡರು ತಮ್ಮ ಬೆಂಬಲಿಗರ ಸಮೇತ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ. ಕೆ. ಶಿವಕುಮಾರ್, ''ಚುನಾವಣೆ ಬಹಳ ದೂರ ಇದೆ. ಶಿವರಾಮೇಗೌಡ ಪಕ್ಷ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರು. ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ತೊರೆದು ಆಪ್ ಸೇರ್ಪಡೆಯಾಗಿದ್ದರು. ಮತ್ತೆ ಕಾಂಗ್ರೆಸ್ಗೆ ಬಂದಿದ್ದಾರೆ'' ಎಂದರು.
ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧತೆ : ''ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇನೆ. ನ್ಯಾಯಾಲಯದ ಸಲಹೆ, ಸೂಚನೆಗೆ ಕಾಯುತ್ತಿದ್ದೇವೆ. ಬೃಹತ್ ಬೆಂಗಳೂರು ಚುನಾವಣೆಗೂ ತಯಾರಿ ನಡೆಸಿದ್ದೇವೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಅದಕ್ಕೆ ನಾವೂ ತಯಾರಿ ಮಾಡಿಕೊಳ್ಳುತ್ತಿದ್ದೇವೆ'' ಎಂದು ತಿಳಿಸಿದರು.
''ಪಕ್ಷಕ್ಕೆ ಬರುವವರ ದೊಡ್ಡ ಪಟ್ಟಿ ಇದೆ. ಸ್ಥಳೀಯ ಜನರ ಅಭಿಪ್ರಾಯ ಕೇಳಬೇಕಿದೆ. 15 ದಿನ, ತಿಂಗಳಿಗೊಮ್ಮೆ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಹಾಲಿ ಶಾಸಕರ ಪಕ್ಷ ಸೇರ್ಪಡೆ ಬಗ್ಗೆ ಬಹಿರಂಗಪಡಿಸಲಾಗದು. ನಿಮ್ಮನ್ನು ಬಿಟ್ಟು ಏನೂ ಮಾಡಲ್ಲ'' ಡಿಕೆಶಿ ಪ್ರತಿಕ್ರಿಯಿಸಿದರು.