ಬೆಂಗಳೂರು: "ಉದ್ವೇಗದ ಕಣ್ಣೀರು, ನಾಟಕೀಯ ಬೇರೆ ಬೇರೆ ಕಣ್ಣೀರು ಇರುತ್ತವೆ. ಕುಮಾರಸ್ವಾಮಿ ಕಣ್ಣೀರು ಚುನಾವಣೆಗೆ ಮಾತ್ರ ಇರುತ್ತೆ. ಈ ಕಣ್ಣೀರು ಎಲ್ಲಾ ಸಂದರ್ಭದಲ್ಲಿ ಬರಲ್ಲ" ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಟೀಕಿಸಿದ್ದಾರೆ. ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ನಾಯಕರ ಕಣ್ಣೀರು ವಿಚಾರವಾಗಿ ಪ್ರತಿಕ್ರಿಯಿಸಿ, ಜನನಾಯಕರು ಜನರ ಕಣ್ಣೀರು ಒರೆಸಬೇಕು. ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸುವುದು ಸ್ವಾರ್ಥಕ್ಕೆ. ಬಹುಶಃ ಇದು ಎಲ್ಲರಿಗೂ ಗೊತ್ತಿರುತ್ತದೆ" ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿಗಳ ಬಗ್ಗೆ ಪ್ರಧಾನಿ ಮೋದಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಮೋದಿ ಯಾವುದನ್ನು ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಐದು ಗ್ಯಾರಂಟಿಗಳು ಆರ್ಥಿಕ ಬದಲಾವಣೆ ತಂದಿದೆ. ಅದು ಅವರಿಗೂ ಗೊತ್ತಿದೆ. ಕರ್ನಾಟಕದ ಮಾಡೆಲ್ ಇಡೀ ದೇಶಕ್ಕೆ ಬಂದಿದೆ. ಅನಿವಾರ್ಯವಾಗಿ ಬಿಜೆಪಿ ಸರ್ಕಾರಗಳು ಬಂದಿದೆ. ಅವರೂ ಕರ್ನಾಟಕದ ಮಾಡೆಲ್ ಜಾರಿ ಮಾಡುತ್ತಾರೆ. ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಇದೆ. ವಿಷಯ ಬೇರೆಕಡೆ ಡೈವರ್ಟ್ ಮಾಡುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.