ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಅನಗತ್ಯವಾಗಿ ಟೀಕೆ ಮಾಡುವುದನ್ನು ಮುಂದುವರೆಸಿದರೆ ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ ಎಂ.ಡಿ. ಲಕ್ಷ್ಮಿನಾರಾಯಣ ಸೇರಿದಂತೆ ಮಾಜಿ ಶಾಸಕರು ಭಿನ್ನಮತೀಯ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಸದಾಶಿನಗರದಲ್ಲಿರುವ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಇಂದು ಮಾಜಿ ಶಾಸಕರಾದ ವೈ.ಸಂಪಂಗಿ, ಚಂದ್ರಪ್ಪ, ಮುನಿಶ್ಯಾಮಪ್ಪ ಸೇರಿದಂತೆ ಮತ್ತಿತರ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಮೊದಲಿಗರು. ಅವರ ವಿರುದ್ಧ ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೇ ಮಾತನಾಡಿದರೂ ನಾವು ಸುಮ್ಮನಿರುವುದಿಲ್ಲ ಗುಡುಗಿದರು.
ಹೈಕಮಾಂಡ್ ನಲ್ಲೂ ಈ ಬಗ್ಗೆ ಮನವಿ ಮಾಡಿದ್ದೇವೆ:ಎಂ.ಡಿ.ಲಕ್ಷ್ಮೀನಾರಾಯಣ ಅವರು ಮಾತನಾಡಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅವರು, ಯಾರೂ ಪತ್ರಿಕಾ ಹೇಳಿಕೆ ಕೊಡಬಾರದು ಎಂದು ಹೇಳಿದ್ದಾರೆ. ಆದಾಗ್ಯೂ ಕೆಲವರು ಮಾತನಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಆಗಬೇಕು. ಹೈಕಮಾಂಡ್ ನಲ್ಲೂ ಈ ಬಗ್ಗೆ ಮನವಿ ಮಾಡಿದ್ದೇವೆ. ಯಾರಿಗಾದರೂ ಭಿನ್ನಾಭಿಪ್ರಾಯ ಇದ್ದರೂ ಪಕ್ಷದೊಳಗೆ ಚರ್ಚೆ ಮಾಡಿ. ಪಕ್ಷದ ಕಚೇರಿಗೆ ಬರದೇ ಎಲ್ಲೋ ಕುಳಿತು ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕೆಲವರು ಪಕ್ಷದ ಬಗ್ಗೆ, ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ. ಕಾರ್ಯಕರ್ತರು ಇದನ್ನು ಸಹಿಸಲು ಸಾಧ್ಯವಿಲ್ಲ. ಬೀದರ್ ನಿಂದ ಚಾಮರಾಜನಗರದ ವರೆಗೆ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಪಕ್ಷದೊಳಗೆ ಏನೇ ಇದ್ದರೂ ಚರ್ಚೆ ಮಾಡಲು ಹಲವು ವೇದಿಕೆಗಳಿವೆ. ಯಡಿಯೂರಪ್ಪನವರು ಹಲವು ವರ್ಷಗಳಿಂದ ಪಕ್ಷ ಕಟ್ಟಿದ್ದಾರೆ. ಅವರಿಗೆ ಅವಹೇಳನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಹಗುರವಾಗಿ ಮಾತನಾಡಿದರೆ ನಾವು ಮಾತನಾಡಬೇಕಾಗುತ್ತದೆ;ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಮೇಶ್ ಜಾರಕಿಹೊಳಿ ಎಂದೂ ಹಗುರವಾಗಿ ಮಾತನಾಡಿದವರಲ್ಲ. ಯಾರೋ ಅವರಿಗೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡಿ ಎಂದು ಹೇಳಿಕೊಟ್ಟಿರಬೇಕು. ಹೀಗಾಗಿ ಬಿಎಸ್‍ವೈ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇದೇ ರೀತಿ ಮಾತನಾಡಿದರೆ ನಾವು ಕೂಡ ಮಾತನಾಡಲೇಬೇಕಾಗುತ್ತದೆ. ಬಿಜೆಪಿಗೆ ರಮೇಶ್ ಜಾರಕಿಹೊಳಿಯನ್ನು ಕರೆತಂದಿದ್ದು ಯಡಿಯೂರಪ್ಪ. ಅನಗತ್ಯವಾಗಿ ಅವರನ್ನು ಟೀಕೆ ಮಾಡಿದರೆ ನಾವು ಸಹಿಸುವುದಿಲ್ಲ. ಇನ್ನು ಮುಂದೆ ಯಡಿಯೂರಪ್ಪ ಅವರ ಬಗ್ಗೆ ಮಾತಾಡಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.