ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಅಚ್ಚರಿ ಹೇಳಿಕೆ ಹಾವೇರಿ :''ಕಳೆದವಿಧಾನಸಭೆ ಚುನಾವಣೆಯಲ್ಲಿ 40 ಕೋಟಿ ರೂ. ಖರ್ಚು ಮಾಡಿದ್ರೂ, ನಾನು ಸೋತಿದ್ದೇನೆ ಎಂದು'' ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ಇದರ ಬೆನ್ನಲ್ಲೇ ಸಭೆಯಲ್ಲಿ ಭಾಗಿಯಾಗಿದ್ದ ಅರುಣ್ ಕುಮಾರ್ ಪೂಜಾರ್ ಮಾತನಾಡಿ, ''ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ನನ್ನ ಸೋಲಿಗೆ ನಾನೇ ಕಾರಣ, ಕಾರ್ಯಕರ್ತರಲ್ಲ. ಚುನಾವಣೆಯಲ್ಲಿ 40 ಕೋಟಿ ರೂ. ಖರ್ಚು ಮಾಡಿದ್ದೇನೆ. ಆದರೂ ಚುನಾವಣೆಯಲ್ಲಿ ಸೋತಿದ್ದೇನೆ'' ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂದರೆ ನಾನೇನು ಮೇಲಿಂದ ಇಳಿದು ಬಂದಿಲ್ಲ. ನಾನು ಕಾರ್ಯಕರ್ತನಾಗಿ ದುಡಿದು ಈ ಸ್ಥಾನಕ್ಕೆ ಬಂದಿದ್ದೇನೆ. ನಮ್ಮ ಗುರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು. ಅದಕ್ಕಾಗಿ ಪಕ್ಷ ಸಂಘಟನೆ ಮಾಡಬೇಕು ಎಂದು ನಾನು ಬಂದಿದ್ದೇನೆ. ನನ್ನ ಶ್ರಮ ಗುರುತಿಸಿ ಪಕ್ಷ ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದಲ್ಲಿ ಗುಂಪುಗಾರಿಕೆ ಮಾಡುವುದು ಸರಿಯಲ್ಲ. ಮುಂಬರುವ ಚುನಾವಣೆಗಳಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಅರುಣ್ ಕುಮಾರ್ ಪೂಜಾರ್ ಹೇಳಿದರು.
ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಸರಿಯಾಗುತ್ತದೆ ಎಂದು ಹೇಳಿದ ಮೇಲೆ ಅಸಮಾಧಾನಿತ ಕಾರ್ಯಕರ್ತರ ಸಭೆ ಮುಕ್ತಾಯಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಕೋಳಿವಾಡ್ ವಿರುದ್ದ ಪರಾಭವಗೊಂಡಿದ್ದರು.
ಇದನ್ನೂ ಓದಿ :ಆನೆ ದಾಳಿಯಿಂದ ಮೃತಪಟ್ಟ ಕೇರಳ ವ್ಯಕ್ತಿಗೆ ರಾಜ್ಯದಿಂದ ಪರಿಹಾರ: ಬಿ.ವೈ ವಿಜಯೇಂದ್ರ ಕಿಡಿ