ಕರ್ನಾಟಕ

karnataka

ETV Bharat / state

ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ 2 ಗೌರವ ಡಾಕ್ಟರೇಟ್ ಪ್ರದಾನ - TWO DOCTORATE FOR KAGODU THIMMAPPA

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಬುಧವಾರ ಕುವೆಂಪು ವಿವಿ ಮತ್ತು ಕೆಳದಿ ಶಿವಪ್ಪ‌ನಾಯಕ ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

FORMER MINISTER KAGODU THIMMAPPA AWARDED 2 HONORARY DOCTORATES FROM TWO UNIVERSITIES ON THE SAME DAY
ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ 2 ಗೌರವ ಡಾಕ್ಟರೇಟ್ ಪ್ರದಾನ (ETV Bharat)

By ETV Bharat Karnataka Team

Published : Jan 22, 2025, 10:53 PM IST

ಶಿವಮೊಗ್ಗ:ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಮತ್ತು ಕೆಳದಿ ಶಿವಪ್ಪ‌ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಬುಧವಾರ ಪ್ರತ್ಯೇಕವಾಗಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಮೊದಲು ಕುವೆಂಪು ವಿವಿಯ ಜ್ಞಾನ ಸಹ್ಯಾದ್ರಿ ಆವರಣದ ಬಸವ ಸಭಾಭವನದಲ್ಲಿ ನಡೆದ 34ನೇ ಘಟಿಕೋತ್ಸವದಲ್ಲಿ ಕಾಗೋಡು ತಿಮ್ಮಪ್ಪ, ಯೋಗಾ ಗುರು ನಾಗರಾಜ್ ಹಾಗೂ ವಿಜ್ಞಾನಿ ಪ್ರೊ. ಸಿ. ಎಸ್. ಉನ್ನಿ ಕೃಷ್ಣನ್ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ನಂತರ ಸಾಗರ ತಾಲೂಕು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ‌ ಮತ್ತು ತೋಟಗಾರಿಕೆ ವಿಜ್ಞಾ‌ನಗಳ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ 9ನೇ ಘಟಿಕೋತ್ಸವ ಸುಗ್ಗಿ ಸಂಭ್ರಮದಲ್ಲಿ ಕಾಗೋಡು ತಿಮ್ಮಪ್ಪನವರಿಗೆ ಎರಡನೇ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

10 ಚಿನ್ನದ ಪದಕ ಪಡೆದ ವಸಂತ ಕುಮಾರ್ ಬಿ.ಜೆ (ETV Bharat)

ಸಂತಸ ವ್ಯಕ್ತಪಡಿಸಿದ ಕಾಗೋಡು ತಿಮ್ಮಪ್ಪ:ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ, "ಇಂದು ಎರಡು ವಿವಿಗಳಿಂದ ನನಗೆ ಡಾಕ್ಟರೇಟ್ ನೀಡಿದ್ದಾರೆ. ಅವರು ನನ್ನ ಸೇವೆ ನೋಡಿ ಡಾಕ್ಟರೇಟ್ ಕೊಟ್ಟಿರುವುದಾಗಿ ಹೇಳಿದ್ದಾರೆ. ರಾಜ್ಯಪಾಲರಿಂದ ಡಾಕ್ಟರೇಟ್ ಸ್ವೀಕರಿಸಿದ್ದು ಸಂತಸದ ವಿಚಾರವಾಗಿದೆ. ಈ ಕೃಷಿ ವಿವಿ ಇನ್ನಷ್ಟು ಚೆನ್ನಾಗಿ‌ ನಡೆದು‌ಕೊಂಡು ಹೋಗಲಿ, ಒಂದೇ ದಿನ ಒಬ್ಬ ರಾಜ್ಯಪಾಲರಿಂದ ಎರಡು ವಿವಿಗಳಿಂದ ಡಾಕ್ಟರೇಟ್ ಪಡೆದವನು ರಾಜ್ಯದಲ್ಲಿ ನಾನೊಬ್ಬನೆ ಇರಬೇಕು. ಮುಂದಿನ ಪಿಳಿಗೆಯು ನಡೆ, ನುಡಿ ಚೆನ್ನಾಗಿ ಇರಬೇಕು" ಎಂದು ಹೇಳಿದರು.

ವಿವಿಯ ಕನ್ನಡ ಭಾರತಿ ವಿಭಾಗದಲ್ಲಿ ವಸಂತ ಕುಮಾರ್ ಬಿ.ಜೆ ಇವರು 10 ಚಿನ್ನದ ಪದಕ ಹಾಗೂ 1 ನಗದು ಬಹುಮಾನ ಪಡೆದಿದ್ದಾರೆ. ಈ ಕುರಿತು ವಸಂತ್ ಕುಮಾರ್​ ಮಾತನಾಡಿ, "ಇಂದು ನನಗೆ ಚಿನ್ನದ ಪದಕಗಳು ಬಂದಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ. ನಾನು ಚಿಕ್ಕಮಗಳೂರು ಜಿಲ್ಲೆ ಬಾಳೆಹೂನ್ನೂರು ಸಮೀಪದ ಭೈರನಮಕ್ಕಿ ಗ್ರಾಮದವನು. ನಮ್ಮದು ಬಡ ಕುಟುಂಬ. ತಂದೆ ಜಗದೀಶ್ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ತಾಯಿ ಮನೆ ನೋಡಿಕೊಳ್ಳುತ್ತಾರೆ. ನನಗೆ ಓದುವುದು ಹವ್ಯಾಸವಾಗಿದೆ. ಈ ಚಿನ್ನದ ಪದಕಗಳನ್ನು ನನ್ನ ತಾಯಿ ಹಾಗೂ ನನ್ನ ಅಜ್ಜನಿಗೆ ಅರ್ಪಿಸುತ್ತೇನೆ" ಎಂದರು.

ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯರು (ETV Bharat)

ನಾಲ್ಕು ಬಂಗಾರದ ಪದಕ ಪಡೆದ ಧನುರ್ವಿ:ಎಂಎಸ್​ಸಿ ಸಸ್ಯಶಾಸ್ತ್ರ ವಿಭಾಗದಲ್ಲಿ ನಾಲ್ಕು ಬಂಗಾರದ ಪದಕ ಪಡೆದ ಧನುರ್ವಿ ಮಾತನಾಡಿ,‌ "ನಾನು ಇಂದು ನಾಲ್ಕು ಬಂಗಾರದ ಪದಕ ಪಡೆದಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ನಾನು ಈ ಹಂತಕ್ಕೆ ಬರಲು ಪೋಷಕರು ಹಾಗೂ ಉಪನ್ಯಾಸಕರು ತುಂಬಾ ಸಹಾಯ ಮಾಡಿದ್ದಾರೆ. ಪದವಿಯಲ್ಲಿಯೇ ಪ್ರಥಮ ರ‍್ಯಾಂಕ್​ ಸ್ವಲ್ಪದರಲ್ಲಿ ತಪ್ಪಿತ್ತು. ಇದರಿಂದ ಸ್ನಾತ್ತಕೋತ್ತರ ಪದವಿಯಲ್ಲಿ ನಾಲ್ಕು ಪದಕ ಪಡೆದುಕೊಂಡಿದ್ದೇನೆ. ಮುಂದೆ ಉಪನ್ಯಾಸಕಿಯಾಗಬೇಕೆಂದುಕೊಂಡಿದ್ದೇನೆ" ಎಂದು ಹೇಳಿದರು.

ಕೃಷಿ ವಿವಿಯಲ್ಲಿ ಪದವಿಯಲ್ಲಿ ನಾಲ್ಕು ಸ್ವರ್ಣ ಪದಕ ಪಡೆದ ಶಿವಮೊಗ್ಗದ ಸಂಜೀತಾ ಮಾತನಾಡಿ, "ನಾನು ಬಡ ಕುಟುಂಬದಿಂದ ಬಂದಿರುವ ಹುಡುಗಿ, ನನ್ನ ತಂದೆ ಶಿವಮೊಗ್ಗದ ರವೀಂದ್ರ ನಗರದ ಗಣಪತಿ ದೇವಾಲಯದಲ್ಲಿ ಅಡುಗೆ ಭಟ್ಟರು. ನನ್ನ ಈ ಸಾಧನೆಗೆ ಕಾರಣರಾದ ನನ್ನ ಕುಟುಂಬ, ಉಪನ್ಯಾಸಕರು, ಸ್ನೇಹಿತರಿಗೆ ಧನ್ಯವಾದ. ನಾನು ಕೋಲಾರದ ಚಿಂತಾಮಣಿಯ ಜಿಕೆವಿಕೆ‌ ಕ್ಯಾಂಪಸ್​ನಲ್ಲಿ ಕೀಟಶಾಸ್ತ್ರ ವಿಭಾಗದಲ್ಲಿ ಎಂಎಸ್​ಸಿ ಓದುತ್ತಿದ್ದೇನೆ. ಮುಂದೆ ನಾನು ಉಪನ್ಯಾಸಕಿಯಾಗುತ್ತೇನೆ" ಎಂದರು.

ಇದನ್ನೂ ಓದಿ:ಮೈಸೂರು ವಿವಿ ಘಟಿಕೋತ್ಸವ: ಭೂಮಿಕಾಗೆ 18 ಚಿನ್ನದ ಪದಕ; ಸುಧಾಮೂರ್ತಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

ABOUT THE AUTHOR

...view details