ರಾಯಚೂರು:"ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳ ಕೆಚ್ಚಲು ಕತ್ತರಿಸುವುದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಪ್ರೇರಣೆ" ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯುವ ನಿಟ್ಟಿನಲ್ಲಿ 14 ಗೋಶಾಲೆಗಳನ್ನು ಆರಂಭಿಸಿತ್ತು. ಆದರೆ, ಈ ಸರ್ಕಾರ ಸಚಿವ ಸಂಪುಟದಲ್ಲಿ ಎಲ್ಲ ಗೋಶಾಲೆಗಳನ್ನು ರದ್ದು ಮಾಡುವ ನಿರ್ಧಾರಕ್ಕೆ ಮುಂದಾಗಿದೆ. ಗೋವಿನ ಬಗ್ಗೆ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಧೋರಣೆ ಕಿಡಿಗೇಡಿಗಳಿಗೆ ಸ್ಫೂರ್ತಿ. ಗೋವನ್ನು ನಾವು ತಾಯಿ ಭಾವನೆಯಿಂದ ನೋಡುತ್ತೇವೆ. ಗೋವಿಗೆ ಈ ರೀತಿ ಮಾಡಿದ್ದರಿಂದ ಇಡೀ ಹಿಂದೂ ಸಮಾಜಕ್ಕೆ ಅಪಮಾನ ಆಗಿದೆ. ಕೆಚ್ಚಲು ಕತ್ತರಿಸಿ, ಕಾಲಿಗೆ ಗಾಯ ಮಾಡಿರೋದು ಉದ್ದೇಶಪೂರಕವಾಗಿ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಅಂತಹ ನೀಚ ಸಂಸ್ಕೃತಿಯನ್ನು ಇವತ್ತು ರಾಜ್ಯದಲ್ಲಿ ಕಾಣುತ್ತಿದ್ದೇವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸಿಎಂ ಹಾಗೂ ಎಲ್ಲರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಅಂತಿದ್ದಾರೆ. ಈ ಮನೋಭಾವನೆ ಹೇಗೆ ಹೋಗಬೇಕು. ಈ ಬಗ್ಗೆ ರಾಜ್ಯ ಸರ್ಕಾರವೇ ಗಮನಿಸಬೇಕು. ನಾವು ಅಧಿಕಾರದಲ್ಲಿದ್ದಾಗ ಗೋ ಹತ್ಯೆ ನಿಷೇಧ ಕಾಯ್ದೆ ತಂದಿದ್ದೇವೆ. ಆದರೆ, ಕಾಂಗ್ರೆಸ್ ಕಾಯ್ದೆ ರದ್ದು ಮಾಡುವ ಬಗ್ಗೆ ಚಿಂತನೆ ಮಾಡುತ್ತೇವೆ ಅಂದಿದ್ರು" ಎಂದು ಹೇಳಿದರು.