ಕರ್ನಾಟಕ

karnataka

ನಾಳೆ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ; ನಮ್ಮ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ ಎಂದ ಮಾಜಿ ಸಚಿವ - Janardhana Reddy

By ETV Bharat Karnataka Team

Published : Mar 24, 2024, 7:16 PM IST

ನಾಳೆ ಮಲ್ಲೇಶ್ವರಂನ‌ ಬಿಜೆಪಿ ಕಚೇರಿಯಲ್ಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

janardhana reddy
ಜನಾರ್ದನ ರೆಡ್ಡಿ

ಬೆಂಗಳೂರು :ನಾಳೆ ಬೆಂಗಳೂರಿನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲು ತೀರ್ಮಾನಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಮಲ್ಲೇಶ್ವರಂನ‌ ಬಿಜೆಪಿ ಕಚೇರಿಯಲ್ಲಿ ಜನಾರ್ದನ ರೆಡ್ಡಿ ಕಮಲ ಪಕ್ಷ ಸೇರಲಿದ್ದಾರೆ. ಬಿಜೆಪಿ ಹೈಕಮಾಂಡ್​ನಿಂದ ಪಕ್ಷ ಸೇರ್ಪಡೆಗೆ ಗ್ರೀನ್‌ ಸಿಗ್ನಲ್ ಸಿಕ್ಕಿದ್ದು, ತಮ್ಮ ಬೆಂಬಲಿಗರ ಜೊತೆ ನಡೆದ ಸಭೆಯಲ್ಲಿ ಬಿಜೆಪಿ ಜತೆ ಕೆಆರ್‌ಪಿಪಿ ಪಕ್ಷದ ವಿಲೀನಕ್ಕೆ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಗಿದೆ. ರೆಡ್ಡಿ ಜತೆ ಕೆಆರ್‌ಪಿಪಿ ಪಕ್ಷದ ಎಲ್ಲ ಮುಖಂಡರೂ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

2023ರ ಜನವರಿಯಿಂದ ಕೆಆರ್‌ಪಿಪಿ ಪಕ್ಷ ಅಧಿಕೃತ ಕಾರ್ಯಾರಂಭ ಮಾಡಿತ್ತು.‌ ತಮ್ಮ ಕೆಆರ್​ಪಿಪಿ ಪಕ್ಷದ ಮೂಲಕ ಜನಾರ್ದನ ರೆಡ್ಡಿ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತಮ್ಮ ಪತ್ನಿ ಸೇರಿ ತಮ್ಮ ಪಕ್ಷದಿಂದ ಸುಮಾರು 47 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವರ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಕೆಲ ಕ್ಷೇತ್ರಗಳಲ್ಲಿ ಹೊಡೆತ ಬಿದ್ದಿತ್ತು.

ಇತ್ತೀಚೆಗೆ ದೆಹಲಿಯಲ್ಲಿ ಜನಾರ್ದನ ರೆಡ್ಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇಂದು ತಮ್ಮ ಪಕ್ಷದ ಮುಂದಿನ ನಿಲುವು ಬಗ್ಗೆ ಬೆಂಬಲಿಗರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬಿಜೆಪಿ ಜೊತೆ ಕೆಆರ್‌ಪಿಪಿ ಪಕ್ಷ ವಿಲೀನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸಭೆಯಲ್ಲಿ ಬಿಜೆಪಿ ಜತೆ ಕೆಆರ್‌ಪಿಪಿ ಪಕ್ಷದ ವಿಲೀನಕ್ಕೆ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಗಿದೆ.

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು.‌ ಇದೀಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಯಾಗಲು ತೀರ್ಮಾನಿಸಿದ್ದಾರೆ.‌

ನಾಳೆ ಬಿಜೆಪಿ ಸೇರಲಿದ್ದೇನೆ :ಸಭೆ ಬಳಿಕ ಮಾತನಾಡಿದ ಜನಾರ್ಧನ ರೆಡ್ಡಿ, ಅಡ್ವಾಣಿ ರಾಮರಥ ಮೂಲಕ ರಾಜಕೀಯ ರಂಗಪ್ರವೇಶ ಆಗಿತ್ತು. ಬಿಜೆಪಿ ನಾಯಕರಿಂದ ಪಕ್ಷ ಸೇರ್ಪಡೆಗೆ ಆಹ್ವಾನ ಇತ್ತು. ನಾಳೆ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದೇನೆ. ಚಿತ್ರದುರ್ಗ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಕೆಆರ್‌ಪಿಪಿ ಕಾರ್ಯಕರ್ತರು ನನ್ನ ನಿರ್ಧಾರಕ್ಕೆ ಬೆಂಬಲಿಸಿದ್ದಾರೆ. ಬಿಜೆಪಿ ಸೇರಲು ಎಲ್ಲರ ಒಪ್ಪಿಗೆ ಇದೆ ಎಂದರು.

ಚಿಕ್ಕವಯಸ್ಸಿಂದ ಬಿಜೆಪಿಯಲ್ಲಿದ್ದೇನೆ. ನಾಳೆ ಬಿಜೆಪಿ ಸೇರುತ್ತಿದ್ದೇನೆ. ಮಾತೃ ಪಕ್ಷಕ್ಕೆ ಮರಳುತ್ತಿದ್ದೇನೆ. ಬಿಜೆಪಿಗೆ ಬಾಹ್ಯ ಬೆಂಬಲ ಕೊಡುವ ವಿಚಾರ ಇತ್ತು. ಆದ್ರೆ ನಮ್ಮ ಪಕ್ಷದ ಕಾರ್ಯಕರ್ತರು ಪಕ್ಷ ವಿಲೀನಕ್ಕೆ ಅಭಿಪ್ರಾಯ ತಿಳಿಸಿದ್ರು. ನಮ್ಮ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ. ಮೋದಿಯವರು ಭಾರತಕ್ಕೆ ವಿಶ್ವ ಮಾನ್ಯ ಹೆಸರು ತಂದು ಕೊಟ್ಟಿದ್ದಾರೆ. ಮತ್ತೆ ಮೋದಿಯವರು ಪ್ರಧಾನಿ ಆಗಲು ನನ್ನ ಬೆಂಬಲ ಇದೆ. ಮತ್ತೆ ಪಕ್ಷ ಸೇರಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ತಿಳಿಸಿದರು.

ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್​ಗೆ ಮತ ಹಾಕಿದ್ದೆ. ಅದು ನನ್ನ ಆತ್ಮಸಾಕ್ಷಿಯ ಮತ ಆಗಿತ್ತು. ಆದ್ರೆ ಮತ್ತೆ ಮೋದಿ ಪ್ರಧಾನಿ ಆಗಲು ಇಡೀ ವಿಶ್ವ ಬಯಸಿದೆ. ನಾನು ಕೂಡಾ ರಕ್ತಗತವಾಗಿ ಮೊದಲಿಂದಲೂ ಅದೇ ವಿಚಾರಧಾರೆ ಉಳ್ಳವನು. ಶ್ರೀರಾಮುಲು ಮತ್ತು ನನ್ನ ಬಗ್ಗೆ ಸಾಕಷ್ಟು ಚರ್ಚೆ ಆಯ್ತು. ಯಡಿಯೂರಪ್ಪ ನನಗೆ ತಂದೆ ಸಮಾನ. ಶ್ರೀರಾಮುಲು ಅವರನ್ನು ಮಗು ರೀತಿ ಬೆಳೆಸಿದ್ದೇನೆ ಎಂದರು.

ಪಕ್ಷಕ್ಕಾಗಿ ದುಡಿಯುತ್ತೇನೆ : ರಾಮುಲು ಜತೆ ಭೇದಭಾವ, ವ್ಯತ್ಯಾಸಗಳು ನನಗೆ ಇಲ್ಲ. ಪಕ್ಷ ಸ್ಥಾಪನೆ ವೇಳೆ ರಾಮುಲುವಾಗಲೀ, ನನ್ನ ಸೋದರರನ್ನಾಗಲಿ ಬರಲಿ ಅಂತ ಕರೆಯಲಿಲ್ಲ. ಈಗಾಗಲೇ ಜನ ಮತ್ತೆ ಮೋದಿ ಅಂತ ತೀರ್ಮಾನ ತಗೊಂಡಿದ್ದಾರೆ. ಲೋಕಸಭಾ ಚುನಾವಣೆ ‌ನಿಲ್ಲುವ ವಿಚಾರ ಇಲ್ಲ. ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗಬೇಕು. ನಾನು ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :ಔಪಚಾರಿಕವಾಗಿ ಮಾತನಾಡಲು ನನ್ನನ್ನು ಅಮಿತ್ ಶಾ ದೆಹಲಿಗೆ ಕರೆದಿದ್ದರು: ಜನಾರ್ದನ ರೆಡ್ಡಿ

ABOUT THE AUTHOR

...view details