ಬೆಳಗಾವಿ: ದೇಶ ಭಕ್ತಿಯನ್ನು ಕೇವಲ ಬಿಜೆಪಿಗೆ ಗುತ್ತಿಗೆ ಕೊಟ್ಟ ಹಾಗೆ ಭಾಷಣ ಮಾಡ್ತಾರೆ. ಈ ದೇಶ ಉಳಿಯಬೇಕು ಎಂದರೆ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ? ಬಿಜೆಪಿ ಹುಟ್ಟಿದ್ದು ಯಾವಾಗ? ಎಂದು ಶಾಸಕರೂ ಆದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರಶ್ನಿಸಿದರು.
ಮೂಡಲಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 1950 ರಲ್ಲಿ ಜನ ಸಂಘ ಹುಟ್ಟಿತು. ಅದು ನಂತರ ಬಿಜೆಪಿ ಆಯ್ತು. ಆದರೆ, ಅದಕ್ಕಿಂತ ಮೊದಲು ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತ್ತು. ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ ಖರ್ಗೆ, ಡಿಕೆಶಿ ಮಾತನಾಡುತ್ತಾ ಕುಳಿತಿದ್ದರು. ಅವರ ಗಮನ ಸೆಳೆಯಲು ನಾನು ಸ್ವಲ್ಪ ಈಕಡೆ ಕೇಳಿ ಅಪಾರ್ಥ ಮಾಡ್ಕೊಬೇಡಿ ಎಂದಿದ್ದೆ. ಬಿಜೆಪಿಯವರು ಕಟ್ ಅಂಡ್ ಪೇಸ್ಟ್ ಮಾಡುವುದರಲ್ಲಿ ಬಹಳ ನಿಸ್ಸೀಮರು. ಅಪಾರ್ಥ ಮಾಡ್ಕೋಬೇಡಿ ಎಂದಿದ್ದನ್ನು ಮಾತ್ರ ಕಟ್ ಮಾಡಿ ಮೋದಿ ಸಾಹೇಬರಿಗೆ ಕಳುಹಿಸಿದ್ದಾರೆ. ಹಾಗಾಗಿ, ಈಗ ನಾ ಮಾತನಾಡಿದ ಈ ವಿಡಿಯೋ ಮಾಡಿ ಮೋದಿ ಸಾಹೇಬರಿಗೆ ಕಳುಹಿಸಿ ಎಂದ ಅವರು, ನಿಜವಾದ ದೇಶ ಭಕ್ತರು ಕಾಂಗ್ರೆಸಿಗರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಬಿಜೆಪಿ ಹುಟ್ಟಿರಲಿಲ್ಲ. ಚಕ್ರವರ್ತಿ ಸೂಲಿಬೆಲೆ ಎಂಬ ಅರಬೆಂದ ವ್ಯಕ್ತಿಗಳಿಂದ ಜನರ ಮುಂದೆ ಸುಳ್ಳು ಹೇಳಿಸುವುದೇ ಬಿಜೆಪಿ ಕೆಲಸ ಎಂದು ಹರಿಹಾಯ್ದರು.
ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕನಾಗಿ ಕೆ.ಎಸ್.ಈಶ್ವರಪ್ಪ ಒಬ್ಬರೇ ಇದ್ದದ್ದು, ಈ ಚುನಾವಣೆಯಲ್ಲಿ ಅವರನ್ನೂ ಮುಗಿಸಿಬಿಟ್ಟರು. ಇದರಿಂದ ಹಿಂದುಳಿದ ವರ್ಗಗಳ ಮೇಲೆ ಬಿಜೆಪಿಯವರಿಗೆ ಅಭಿಮಾನ ಇಲ್ಲ ಎಂದು ತೋರುತ್ತದೆ. ಇದಕ್ಕೆ ಹಾಲು ಮತ ಸಮುದಾಯದವರು ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. 40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದರೂ ಈಶ್ವರಪ್ಪಗೆ ಬಿಜೆಪಿ ಅನ್ಯಾಯ ಎಸಗಿದೆ ಎಂದು ಶಾಸಕ ಲಕ್ಷ್ಮಣ್ ಸವದಿ ಟೀಕಿಸಿದರು.