ಶಿವಮೊಗ್ಗ :ಮೋದಿಯಂತೆ ಕುಟುಂಬ ರಾಜಕಾರಣದ ವಿರುದ್ದ ನಾನು ಹೋರಾಟ ನಡೆಸುತ್ತೇನೆ ಮತ್ತು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ನಗರದ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನಾನು ಬಿಜೆಪಿ ಬಂಡಾಯವಲ್ಲ. ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದೇನೆ. ನಾನು ಸಿದ್ಧಾಂತಕ್ಕೋಸ್ಕರ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಹಿಂದೂತ್ವ ಉಳಿಸಲು ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಪಕ್ಷದ ಪರವಾಗಿ ಹಿಂದೆ ಕೆಲಸ ಮಾಡಿದವರಿಗೆ, ಈಗ ಕೆಲಸ ಮಾಡುತ್ತಿರುವವರಿಗೆ ನೋವಿದೆ. ಆ ನೋವು ಹೋಗಲಾಡಿಸುವುದಕ್ಕೋಸ್ಕರ ಚುನಾವಣೆಗೆ ನಿಂತಿದ್ದೇನೆ. ನೀವು ಕೇಂದ್ರಿಯ ಚುನಾವಣಾ ಸಮಿತಿ ಸದಸ್ಯರು, ನಿಮ್ಮ ಮಗ ಸಂಸದ, ಇನ್ನೊಬ್ಬ ಮಗ ಶಾಸಕ, ರಾಜ್ಯಾಧ್ಯಕ್ಷ, ಕುಟುಂಬ ರಾಜಕಾರಣದ ವಿರುದ್ದ ಮೋದಿ ಏನ್ ಪ್ರಯತ್ನ ಮಾಡುತ್ತಿದ್ದಾರೆ. ಅದೇ ಪ್ರಯತ್ನವನ್ನು ನಾನು ಕರ್ನಾಟಕದಲ್ಲಿ ಮಾಡುತ್ತಿದ್ದೇನೆ. ಅದಕೋಸ್ಕರ ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ. ಇದು ಯಡಿಯೂರಪ್ಪ ಅವರಿಗೆ ಅರ್ಥವಾಗಲಿ ಎಂದರು.
ನಾನು ಚುನಾವಣೆಯಲ್ಲಿ ವಿಜಯೇಂದ್ರ ಹಣ ಖರ್ಚು ಮಾಡಿ ಗೆದ್ದರು ಎಂದು ಹೇಳಿಲ್ಲ. ಚುನಾವಣೆಯಲ್ಲಿ ಹಣ, ಜಾತಿ ಕೆಲಸ ಮಾಡುತ್ತದೆ ಎಂದಿದ್ದೇನೆ. ಇದರ ಬಗ್ಗೆ ಕಾರ್ಯಕರ್ತರು ಗಮನ ನೀಡಬೇಡಿ. ಸಿದ್ದಾಂತದ ಬಗ್ಗೆ ಗಮನ ನೀಡೋಣ ಎಂದು ಹೇಳಿದ್ದೇನೆ. ಪಕ್ಷ ಶುದ್ಧೀಕರಣವಾಗಬೇಕು ಎಂದು ಸದಾನಂದಗೌಡರು ಹೇಳಿದ್ದಾರೆ. ಇದರಿಂದ ಸದ್ಯಕ್ಕೆ ಪಕ್ಷದಿಂದ ಹೊರ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಎರಡೇ ತಿಂಗಳಲ್ಲಿ ಮತ್ತೆ ಬಿಜೆಪಿಗೆ ಬರುತ್ತೇನೆ ಎಂದರು. ಮೋದಿ ಅವರನ್ನ ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಕ್ಷೇತ್ರದ ಜನರ ಪರವಾಗಿ ಕೈ ಎತ್ತುತ್ತೇನೆ ಎಂದು ತಿಳಿಸಿದರು.