ಮಂಡ್ಯ:ಕರ್ನಾಟಕದಮಾಜಿ ಸಿಎಂ, ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರಾದ ಮದ್ದೂರಿನ ಸೋಮನಹಳ್ಳಿಯಲ್ಲಿ ಇಂದು ಸಂಜೆ ನಡೆಯಿತು.
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನಗಳ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ ತಮ್ಮ ಅಜ್ಜನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದರೊಂದಿಗೆ ಎಸ್ಎಂಕೆ ಪಂಚಭೂತಗಳಲ್ಲಿ ಲೀನರಾದರು.
ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ (ETV Bharat) ಅಗ್ನಿಸ್ಪರ್ಶಕ್ಕೂ ಮುನ್ನ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವಪೂರ್ವಕವಾಗಿ ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಲಾಯಿತು.
ಇದಕ್ಕೂ ಮುನ್ನ ಅಂತ್ಯಕ್ರಿಯೆ ಸ್ಥಳದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಕುಟುಂಬಸ್ಥರೂ ಸೇರಿದಂತೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ:ಸೋಮನಹಳ್ಳಿಗೆ ಆಗಮಿಸಿದ ಎಸ್.ಎಂ. ಕೃಷ್ಣ ಪಾರ್ಥಿವ ಶರೀರ: ಅಂತಿಮ ದರ್ಶನ ಪಡೆದ ಗಣ್ಯರು