ಚಾಮರಾಜನಗರ: ಸೂರ್ಯ- ಚಂದ್ರ ಇರುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, 10 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ಮೋದಿಯವರು ಪ್ರಪಂಚದ ವಿವಿಧ ದೇಶಗಳಿಗೆ ಹೋಗಿ ಬಂದರೂ ಒಂದು ದಿನ ವಿಶ್ರಾಂತಿ ತೆಗೆದುಕೊಂಡಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ, ಸರ್ಕಾರ ದಿವಾಳಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ 50 ಸ್ಥಾನ ಗೆಲ್ಲಲು ಸಾಧ್ಯವಿಲ್ಲ. ಸುಮ್ಮನೆ ಪೊಳ್ಳು ಭರವಸೆ ಕೊಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಬೆಂಗಳೂರಿಗೆ ಬಂದಾಗ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿದ್ದರು. ಆ ಮೂಲಕ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮೊದಲು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ ಎಂದು ಬಿಎಸ್ವೈ ಸವಾಲು ಹಾಕಿದರು.
ಮೋದಿಯವರು ಕಿಸಾನ್ ಸಮ್ಮಾನ್, ಜಲಜೀವನ್ ಮಿಷನ್, ಉಚಿತ ಅಡುಗೆ ಅನಿಲ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರ ಉಚಿತವಾಗಿ ಕೊಡುವ ಅಕ್ಕಿಯನ್ನು ಕಾಂಗ್ರೆಸ್ ನವರು ತಾವು ಕೊಟ್ಟಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾಡಿನೆಲ್ಲೆಡೆ ಜನರ ಬೆಂಬಲ ಮೋದಿಯವರ ಪರ ಹೆಚ್ಚಾಗುತ್ತಿದೆ. ಚಾಮರಾಜನಗರದಲ್ಲಿ ಬಾಲರಾಜು ಅವರನ್ನು ಗೆಲ್ಲಿಸಿ ಮೋದಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ನಾವು ಕೊಟ್ಟಂತ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ ಯಾಕೆ ನಿಲ್ಲಿಸಿದ್ದೀರಿ, ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯದ ಪಾಲು 4 ಸಾವಿರ ಯಾಕೆ ನಿಲ್ಲಿಸಿದ್ದೀರಿ?. ಮನೆ ಮನೆಗೆ ಹೋಗಿ ಬಿಜೆಪಿ ಪರ ನಮ್ಮ ಅಭ್ಯರ್ಥಿಗೆ ಮತ ಹಾಕಿಸಿ ಎಂದು ಕಾರ್ಯಕರ್ತರಿಗೆ ವಿನಂತಿಸಿದರು. ಬೆಂಗಳೂರಲ್ಲಿ ಬಾಂಬ್ ಸ್ಫೋಟವಾಗಿದೆ, ಹುಬ್ಬಳ್ಳಿಯಲ್ಲಿ ಯುವತಿಯ ಹತ್ಯೆಯಾಗಿದೆ. ಆದರೆ, ಕಾಂಗ್ರೆಸ್ ನವರು ಒಂದೇ ಕೋಮಿನ ಓಲೈಕೆಯಲ್ಲಿದ್ದಾರೆ. ಕಾಂಗ್ರೆಸ್ ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ನಾನು ಇಲ್ಲಿ ಬಂದಿದ್ದಕ್ಕೆ ಸಾರ್ಥಕವಾಗಬೇಕಾದರೆ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಕಾಂಗ್ರೆಸ್ ಎಷ್ಟೇ ಬೊಬ್ಬೆ ಹೊಡೆದರೂ ಮೋದಿ ಮೂರನೇ ಬಾರಿ ಪ್ರಧಾನಿ ಆಗೇ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಹೆಚ್ಡಿಕೆ ವಿರುದ್ಧ ಎಫ್ಐಆರ್ - H D Kumaraswamy
ಕಾಂಗ್ರೆಸ್ ಜಾಹೀರಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ:ಬಳಿಕ ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇಡೀ ರಾಜ್ಯದಲ್ಲಿ ಮೋದಿ ಪರ ಒಲವಿದೆ, ಎಲ್ಲೆಡೆ ಮೋದಿ, ಮೋದಿ ಎನ್ನುತ್ತಿದ್ದಾರೆ. ಈ ಬಾರಿ ಚಾಮರಾಜನಗರ ಸೇರಿದಂತೆ ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಜಾಹಿರಾತುಗಳಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಚೊಂಬು, ತೆರಿಗೆ ಬಾಕಿ ಜಾಹೀರಾತುಗಳಿಗೆ ತಿರುಗೇಟು ನೀಡಿದರು.
ಎನ್ಡಿಎಗೆ ಈ ಬಾರಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಮೋದಿ ಆಯ್ಕೆಗೊಳ್ಳುವುದು ನಿಶ್ಚಿತ ಎಂದರು. ಇದೇ ವೇಳೆ,ಈಶ್ವರಪ್ಪ ಸ್ಪರ್ಧೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಎಸ್ವೈ ಹೇಳಿದರು.