ಕರ್ನಾಟಕ

karnataka

By ETV Bharat Karnataka Team

Published : Apr 27, 2024, 7:30 PM IST

Updated : Apr 27, 2024, 7:54 PM IST

ETV Bharat / state

ಕಾಂಗ್ರೆಸ್ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಎಲ್ಲ ದರೋಡೆಯಾಗಿದೆ: ಯಡಿಯೂರಪ್ಪ - B S Yediyurappa

ವಿಜಯಪುರದಲ್ಲಿ ಇಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ರಮೇಶ್​ ಜಿಗಜಿಣಗಿ ಪರ ಭರ್ಜರಿ ಪ್ರಚಾರ ನಡೆಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಎಲ್ಲ ದರೋಡೆಯಾಗಿದೆ: ಯಡಿಯೂರಪ್ಪ
ಕಾಂಗ್ರೆಸ್ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಎಲ್ಲ ದರೋಡೆಯಾಗಿದೆ: ಯಡಿಯೂರಪ್ಪ

ಯಡಿಯೂರಪ್ಪ

ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಬಿರುಸಿನ‌ ಪ್ರಚಾರ ನಡೆಸಿದರು. ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್, ಸಂಗೊಳ್ಳಿ ರಾಯಣ್ಣ ಮಾರ್ಗವಾಗಿ ಬನಶಂಕರಿ ದೇಗುಲದವರಿಗೆ ರೋಡ್ ಶೋ ಜರುಗಿತು. ರೋಡ್ ಶೋ ಬಳಿಕ ಪಟ್ಟಣದ ಬನಶಂಕರಿ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ 10 ವರ್ಷವಾದರೂ ಒಂದೇ ದಿನ ವಿಶ್ರಾಂತಿ ಪಡೆದಿಲ್ಲ. ಅವರು ದೇಶ ಹಾಗೂ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಎನ್​ಡಿಎ ಗೆಲ್ಲುವ ವಾತಾವರಣ ಇದೆ. ನಿನ್ನೆ ಮತದಾನ ನಡೆದ 14 ಕ್ಷೇತ್ರಗಳಲ್ಲಿ ಎನ್​ಡಿಎ ಗೆಲ್ಲಲಿದೆ. ಹಿಂದೆ ಹಣ ಬಲ, ಜಾತಿ ಬಲ, ತೋಳ್ ಬಲ ದಿಂದ ಚುನಾವಣೆ ಗೆಲ್ಲುತ್ತೇವೆಂದು ಕಾಂಗ್ರೆಸ್ ನವರು ನಂಬಿದ್ದರು. ಆದರೆ ಈಗ ಕಾಲ ಬದಲಾಗಿದೆ ಎಂದು ಹೇಳಿದರು.

ನಾನು ಸಿಎಂ ಆಗಿದ್ದಾಗ 4,500 ಕೋಟಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಅನುದಾನ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾವುದಾದರೂ ಅನುದಾನ ಕಾರ್ಯಕ್ರಮ ಕೊಟ್ಟಿದ್ದಾರಾ?. ಸರ್ಕಾರ ದಿವಾಳಿಯಾಗಿದೆ, ಪಾಪರ್ ಆಗಿದೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಜನರು ಕೊಟ್ಟ ತೆರಿಗೆ ಹಣ ಎಲ್ಲ ದರೋಡೆಯಾಗಿದೆ. ವಿದ್ಯುತ್ ದರ ಏರಿಕೆಯಾಗಿದೆ, ಕಿಸಾನ್ ಸಮ್ಮಾನ್​ ಯೋಜನೆ ಹಣ ನೀಡುತ್ತಿಲ್ಲ. ಭಾಗ್ಯಲಕ್ಷ್ಮಿ ಬಾಂಡ್ ಯಾಕೆ ನೀಡುತ್ತಿಲ್ಲ, ಎಲ್ಲಾ ಯೋಜನೆ ನಿಂತುಹೋಗಿವೆ. ಕಾಂಗ್ರೆಸ್ ನವರು ಕೇವಲ ಪ್ರಚಾರಕ್ಕೆ ನಿಂತಿದ್ದಾರೆ. ಹಾಗಾಗಿ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಬೇಕು ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ಕಾಂಗ್ರೆಸ್ ನವರು ಬರಲಿಲ್ಲ. ಅವರಿಗೆ ಶ್ರೀರಾಮ ಇಷ್ಟ ಇರಲಿಲ್ಲ, ಇದು ಕಾಂಗ್ರೆಸ್ಸಿನ ನೀತಿ. ಈ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಪಾಠ ಕಲಿಸಬೇಕಾಗಿದೆ. ದೇಶ ವಿದೇಶಗಳಲ್ಲಿ ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ಸಿಗುತ್ತಿದೆ. ಇಡೀ ವಿಶ್ವವೇ ಮೋದಿ ಅವರನ್ನು ಹಾಡಿ ಹೊಗಳುತ್ತಿದೆ. ಈ ಬಾರಿ ನಾವು 400 ಕ್ಕೂ ಅಧಿಕ ಸೀಟ್ ಗಳನ್ನು ಗೆಲ್ಲುತ್ತೇವೆ. ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಇಡೀ ರಾಜ್ಯದಲ್ಲಿ ಒಳ್ಳೆಯ ವಾತಾವರಣವಿದೆ ಎಂದು ಹೇಳಿದರು.

ನನಗೆ ನೀವು ಮುಖ್ಯ, ನನ್ನ ಮಗನಲ್ಲ:ನನಗೆ 82 ವರ್ಷ ವಯಸ್ಸಾಗಿದೆ, ಆದರೂ ನಾನು ಮನೆ ಸೇರಿಲ್ಲ, ಓಡಾಡುತ್ತಿದ್ದೇನೆ. ಇನ್ನೊಂದು ಲೋಕಸಭಾ ಚುನಾವಣೆ ಮಾಡುತ್ತೇನೆ. ಉರಿ ಬಿಸಿಲನ್ನು ಲೆಕ್ಕಿಸದೇ ಇಲ್ಲಿನ ಜನ ಸಾಗರ ನೋಡಿದರೆ ಜನರಿಗೆ ಏನೂ ಕೊಟ್ಟರೂ, ಏನು ಮಾಡಿದರೂ ಕಡಿಮೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಸೂರ್ಯಚಂದ್ರರಷ್ಟೇ ಸತ್ಯ. ತಾವೆಲ್ಲರೂ ನಮ್ಮ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರಿಗೆ ಮತ ಹಾಕಬೇಕು. ನನ್ನ ಮಗ ಚುನಾವಣೆಗೆ ನಿಂತಿದ್ದರೂ ಇಲ್ಲಿಗೆ ಬಂದಿದ್ದೇನೆ. ನನಗೆ ನೀವು ಮುಖ್ಯ ನನ್ನ ಮಗನಲ್ಲ ಎಂದಾಗ ನೆರೆದ ಜನರು, ಕಾರ್ಯಕರ್ತರು ಜೋರಾದ ಚಪ್ಪಾಳೆ ತಟ್ಟಿದರು.

ಇದಕ್ಕೂ ಮುನ್ನ ಪಟ್ಟಣದ ಎಂಜಿವಿಸಿ ಮೈದಾನದಲ್ಲಿ ಬರ ಪರಿಹಾರ ಬಿಡುಗಡೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದೆಲ್ಲೆಡೆ ಭೀಕರ ಬರಗಾಲವಿದೆ. ಜನ ಸಂಕಷ್ಟದಲ್ಲಿದ್ದಾರೆ. ಆದಷ್ಟು ಬೇಗ ಬರಗಾಲ ಹಣವನ್ನು ಕೇಂದ್ರ ಬಿಡುಗಡೆ ಮಾಡುತ್ತೆ ಎಂದು ಹೇಳಿದರು.

ಇದನ್ನೂ ಓದಿ:ಜನ ಕಾಂಗ್ರೆಸ್ ಗ್ಯಾರಂಟಿ ಅಲ್ಲ, ಮೋದಿ ಗ್ಯಾರಂಟಿ ನೋಡುತ್ತಾರೆ: ಬಿ.ವೈ.ರಾಘವೇಂದ್ರ - b y raghavendra

Last Updated : Apr 27, 2024, 7:54 PM IST

ABOUT THE AUTHOR

...view details