ಬೆಂಗಳೂರು : ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮೆಟ್ರೋ ಸಿಬ್ಬಂದಿ ರಕ್ಷಿಸಿದ್ದಾರೆ. ನಮ್ಮ ಮೆಟ್ರೋ ಹಸಿರು ಮಾರ್ಗದ ಜಾಲಹಳ್ಳಿ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ವಾಯುಪಡೆಯ ಮಾಜಿ ಅಧಿಕಾರಿಯಾಗಿರುವ ಬಿಹಾರ ಮೂಲದ ಅನಿಲ್ ಕುಮಾರ್ ಪಾಂಡೆ (49) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಇಂದು ಬೆಳಗ್ಗೆ 10:25ರ ಸುಮಾರಿಗೆ ಘಟನೆ ನಡೆದಿದ್ದು, ಸೆಂಟ್ರಲ್ ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಮಾದಾವರ ಮಾರ್ಗವಾಗಿ ಸಂಚರಿಸುತ್ತಿದ್ದ ಮೆಟ್ರೋ ರೈಲು, ಜಾಲಹಳ್ಳಿ ನಿಲ್ದಾಣ ತಲುಪುತ್ತಿದ್ದಂತೆ ಅನಿಲ್ ಕುಮಾರ್ ಪಾಂಡೆ ಹಳಿ ಮೇಲೆ ಜಿಗಿದಿದ್ದಾರೆ. ಎಮರ್ಜೆನ್ಸಿ ಟ್ರಿಪ್ ಸಿಸ್ಟಂ (ETS) ಹಾಗೂ ಮೆಟ್ರೋ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಕ್ಷಣ ಅನಿಲ್ ಕುಮಾರ್ ಪಾಂಡೆ ಅವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.