ಕರ್ನಾಟಕ

karnataka

ETV Bharat / state

ಶಿರೂರು ಗುಡ್ಡ ಕುಸಿತ ಪ್ರಕರಣ : ರಕ್ಷಣಾ ಗೋಡೆ ನಿರ್ಮಾಣಕ್ಕೆ ವಿದೇಶಿ ತಜ್ಞರಿಂದ ಪರಿಶೀಲನೆ - FOREIGN EXPERTS INSPECTION

ಜಪಾನ್ ಇಂಟರ್ನ್ಯಾಷನಲ್ ಕೋ. ಆಪರೇಷನ್ ಏಜೆನ್ಸಿ (ಜೆಐಸಿಎ)ಯ ನಾಲ್ವರು ತಜ್ಞರು ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ (ಎನ್​ಐಆರ್​ಎಂ)ನ ಮೂವರು ತಜ್ಞರ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿದೆ.

A team of foreign experts arrived in Shirur
ಶಿರೂರಿಗೆ ಆಗಮಿಸಿದ ವಿದೇಶಿ ತಜ್ಞರ ತಂಡ (ETV Bharat)

By ETV Bharat Karnataka Team

Published : Feb 12, 2025, 6:04 PM IST

ಕಾರವಾರ (ಉತ್ತರ ಕನ್ನಡ) : ಅಂಕೋಲಾದ ಶಿರೂರು ಗುಡ್ಡ ಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಲು ವಿದೇಶಿ ತಜ್ಞರ ತಂಡ ಜಿಲ್ಲೆಗೆ ಆಗಮಿಸಿದೆ. ಎನ್‌ಹೆಚ್‌ಎಐ ಸಹಕಾರದಲ್ಲಿ ಜಪಾನ್ ಇಂಟರ್ನ್ಯಾಷನಲ್ ಕೋ. ಆಪರೇಷನ್ ಏಜೆನ್ಸಿ (ಜೈಕಾ) ಸಂಸ್ಥೆ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ (ಎನ್‌ಐಆರ್‌ಎಮ್) ಸಂಸ್ಥೆಯ ಒಟ್ಟು 7 ತಜ್ಞರ ತಂಡ ಜಿಲ್ಲೆಗೆ ಆಗಮಿಸಿದೆ.

2024 ಜೂನ್ 16ರಂದು ನಡೆದ ಶಿರೂರು ಗುಡ್ಡ ಕುಸಿತದ ದುರಂತದ ನಂತರ ಭಾರತೀಯ ಭೂ ವಿಜ್ಞಾನ ಸಮೀಕ್ಷೆ ಇಲಾಖೆ (ಜಿಎಸ್‌ಐ) ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ನೀಡಿತ್ತು. ಆದರೆ ಶಿರೂರು ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾಗದಂತೆ ಯಾವ ರೀತಿಯ ಕ್ರಮ ಅನುಸರಿಸಬೇಕು ಎನ್ನುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗಿರುವ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ತೆರಳಿ ಭೂ ತಜ್ಞರ ತಂಡ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಕೊಂಡೊಯ್ದಿತ್ತು. ಈ ವೇಳೆ ಸುಮಾರು 5 ಮೀಟರ್ ಅಂತರದಲ್ಲಿ 2-3 ರೀತಿಯ ಮಣ್ಣಿನ ಗುಣಮಟ್ಟ ಕಂಡು ಬಂದಿತ್ತು. ಹೀಗಾಗಿ ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿರಲಿಲ್ಲ.

ಇದೀಗ ಜಪಾನ್ ಇಂಟರ್ನ್ಯಾಷನಲ್ ಕೋ. ಆಪರೇಷನ್ ಏಜೆನ್ಸಿ (ಜೆಐಸಿಎ)ಯ ಟೀಮ್ ಲೀಡರ್ ಕವಮುರ ಯಶಿನೋರಿ ನೇತೃತ್ವದ ನಾಲ್ವರು ತಜ್ಞರು ಹಾಗೂ ಭಾರತ ಸರ್ಕಾರದ ಗಣಿ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಶೋಧನಾ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ (ಎನ್​ಐಆರ್​ಎಂ)ನ ಮೂವರು ಸೇರಿದಂತೆ ಒಟ್ಟು 7 ಜನ ತಜ್ಞರ ತಂಡ ಸೋಮವಾರದಿಂದ ಜಿಲ್ಲೆಯ ಶಿರೂರು ಪ್ರದೇಶದಲ್ಲಿ ಬೀಡು ಬಿಟ್ಟಿದೆ.

ತಂಡ ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲಿ ಮಣ್ಣಿನ ಗುಣಮಟ್ಟ ಹೇಗಿದೆ ಎನ್ನುವುದನ್ನು ಪರೀಕ್ಷಣೆ ನಡೆಸುತ್ತಿದೆ. ಗುಡ್ಡ ಕುಸಿತ ಮತ್ತೆ ಮರುಕಳಿಸಂದಂತೆ ಎಚ್ಚರ ವಹಿಸಿ ರಕ್ಷಣಾ ಗೋಡೆ ನಿರ್ಮಾಣ ಹೇಗೆ ಎನ್ನುವ ವಿಚಾರಕ್ಕೆ ಸಂಬಧಿಸಿದಂತೆ ಮಹತ್ವದ ನಿರ್ಣಯ ಕೈಗೊಳ್ಳಲಾಗುತ್ತಿದೆ. ಕೇವಲ ಕುಸಿತವಾದ ಪ್ರದೇಶ ಅಷ್ಟೇ ಅಲ್ಲದೆ, ಕುಸಿತ ಪ್ರದೇಶದ ಪಕ್ಕದಲ್ಲಿ ಕುಸಿತದ ಆತಂಕದಲ್ಲಿರುವ ಸುಮಾರು 100 ಮೀಟರ್ ವ್ಯಾಪ್ತಿ ಪ್ರದೇಶದಲ್ಲೂ ರಕ್ಷಣಾ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮ ಅನುಸರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಗುಡ್ಡ ಕುಸಿತ ತಡೆಗೆ ಮೆಟಲ್ ನೆಟ್ ವಾಲ್ ಅಥವಾ ರಕ್ಷಣಾ ಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಲು ಆಲೋಚಿಸಲಾಗಿತ್ತು. ಆದರೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಕ್ಷಣಾ ಗೋಡೆ ನಿರ್ಮಿಸುವ ಉದ್ದೇಶದಿಂದ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. "ಜಪಾನಿನ ಜೈಕಾ" ತಜ್ಞರಿಗೆ ತಾಂತ್ರಿಕ ನೆರವು ನೀಡುತ್ತಿರುವ "ಎನ್‌ಐಆರ್‌ಎಮ್" ಸಂಸ್ಥೆಯ ಫೆಬ್ರುವರಿ 6ನೇ ದಿನಾಂಕದಿಂದ ಈ ಪ್ರದೇಶವನ್ನು ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆಯು ಸುಮಾರು ನಾಲ್ಕು ತಿಂಗಳವರೆಗೆ ನಡೆಯುವ ಸಾದ್ಯತೆ ಇದೆ. ಎನ್‌ಐಆರ್‌ಎಮ್ ತಂಡ ಈಗಾಗಲೇ ಪೀಡಿತ ಪ್ರದೇಶದಲ್ಲಿ ಅನಾಹುತಗಳನ್ನು ತಡೆಗಟ್ಟುವ ಮತ್ತು ಅವಘಡಗಳನ್ನು ತಗ್ಗಿಸುವ ಕ್ರಮಗಳಿಗೆ ಅಗತ್ಯ ಸಲಹೆ ಸೂಚನೆ ನೀಡಲಿದೆ ಎಂದು ಮಾಹಿತಿ ನೀಡಿದರು.

ಈ ಎಲ್ಲಾ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಕ್ಕೆ ತಾಂತ್ರಿಕ ಬೆಂಬಲವನ್ನೂ ಸಹ ನೀಡಲಿದೆ. ಫೆ.12ಕ್ಕೆ ಜಿಲ್ಲೆಗೆ ಜಿಎಸ್‌ಐ ತಂಡ ಶಿರೂರು ಗುಡ್ಡ ಕುಸಿತ ದುರಂತದ ನಂತರ ಕಾರವಾರದ ಮಾಜಾಳಿಯಿಂದ ಭಟ್ಕಳವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದ ಭಾರತೀಯ ಭೂ ವಿಜ್ಞಾನ ಸಮೀಕ್ಷೆ ಇಲಾಖೆ (ಜಿಎಸ್‌ಐ)ಅಧಿಕಾರಿಗಳು ಮತ್ತೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಕಾರವಾರದಿಂದ ಭಟ್ಕಳದವರೆಗೆ ಒಟ್ಟು 18 ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಈ ತಂಡ ಪ್ರಸ್ತುತ ಹೆದ್ದಾರಿ ಅಂಚಿನ ಗುಡ್ಡ ಪ್ರದೇಶ ಹಾಗೂ ಮಣ್ಣಿನ ಗುಣಮಟ್ಟವನ್ನು ಸಹ ಅಳೆಯಲಾಗುತ್ತಿದೆ. ಈ ಆಧಾರದ ಮೇಲೆ ಸುರಕ್ಷತಾ ಕ್ರಮಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಶಿವಕುಮಾರ್, "ಎನ್‌ಹೆಚ್‌ಎಐ ಅಧಿಕಾರಿಗಳು, ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್‌ನ ಪ್ರತಿನಿಧಿಗಳೊಂದಿಗೆ ಶಿರೂರು ಪ್ರದೇಶದಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜೈಕಾ ಹಾಗೂ ಎನ್‌ಐಆರ್‌ಎಮ್ ಪರಿಣಿತ ತಂಡವನ್ನು ಜಿಲ್ಲೆಗೆ ಕರೆಸಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.

"ಜಪಾನಿನ ಜೈಕಾ ಸಂಸ್ಥೆಯವರು ಶಿರೂರಿನಲ್ಲಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿ ಸಿದ್ಧಪಡಿಸಲು ಬಂದಿದ್ದಾರೆ. ನಾವು ಆದಷ್ಟು ಬೇಗ ನೀಡುವಂತೆ ಕೇಳಿದ್ದೇವೆ. ವಿಳಂಬವಾದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲು ಕಷ್ಟವಾಗಲಿದೆ" ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಪ್ರತಿಕ್ರಿಯಿಸಿದರು.

ಇದನ್ನೂ ಓದಿ:6 ತಿಂಗಳಾದ್ರೂ ನದಿಯಿಂದ ತೆರವಾಗದ ಗುಡ್ಡದ ಮಣ್ಣು; ಮತ್ತೆ ಪ್ರವಾಹ ಭೀತಿಯಲ್ಲಿ ಶಿರೂರು ಜನ

ABOUT THE AUTHOR

...view details