ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲ ಆಹಾರದ ಗುಣಮಟ್ಟವನ್ನು ಪರಿಶೀಲಿಸಿ ವರದಿ ನೀಡಿದೆ. ಅದರಂತೆ ಕೆಲ ಆಹಾರ ಪದಾರ್ಥಗಳು ಅಸುರಕ್ಷಿತ ಎಂಬ ವರದಿ ಬಂದಿದೆ.
ಚೀನಾ ದೇಶದಿಂದ ಸರಬರಾಜಾಗುತ್ತಿರುವುದಾಗಿ ಹೇಳಲಾದ ಕೃತಕ/ನಿಷೇಧಿತ ಬೆಳ್ಳುಳ್ಳಿ ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ವಿಶೇಷ ಆಂದೋಲನವನ್ನು ಕೈಗೊಳ್ಳುವ ಮೂಲಕ ರಾಜ್ಯಾದ್ಯಂತ 154 ಬೆಳ್ಳುಳ್ಳಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಅವುಗಳಲ್ಲಿ 147 ಮಾದರಿಗಳು ಸುರಕ್ಷಿತವಾಗಿವೆ. ಇನ್ನುಳಿದ 7 ಮಾದರಿಗಳಲ್ಲಿ ಫಂಗಸ್ ಬೆಳವಣಿಗೆ ಕೊಳೆತಿದ್ದ ಹಿನ್ನೆಲೆಯಲ್ಲಿ ಅಸುರಕ್ಷಿತ (Unsafe)ವಾಗಿವೆ ಎಂಬುದು ವರದಿಯಲ್ಲಿ ಗೊತ್ತಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.
'ಅದೇ ರೀತಿ ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ಸಿಹಿ ತಿಂಡಿಗಳು ಮಾರಾಟವಾಗುವ ಹಿನ್ನೆಲೆಯಲ್ಲಿ 151 ಸಿಹಿ ತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 143 ಮಾದರಿಗಳು ಸುರಕ್ಷಿತ, 9 ಮಾದರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಕಂಡುಬಂದಿದ್ದು ಅಸುರಕ್ಷಿತ (Unsafe) ಎಂಬುದು ಖಚಿತವಾಗಿದೆ'.
ಗೋಲ್ ಗಪ್ಪಾ: 'ಹೊರ ರಾಜ್ಯಗಳಲ್ಲಿ ಗೋಲ್ ಗಪ್ಪಾ ರುಚಿಯನ್ನು ಹೆಚ್ಚಿಸಲು ಅದಕ್ಕೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರದಲ್ಲಿ ಬಳಸುತ್ತಿರುವ ಮತ್ತು ಗೋಲ್‌ಗಪ್ಪಾ ಹಿಟ್ಟನ್ನು ಕಾಲಿನಲ್ಲಿ ತುಳಿದು ತಯಾರಿಸುತ್ತಿರುವ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಸಂಬಂಧಿಸಿದಂತೆ ರಾಜ್ಯಾದ್ಯಂತ ಗೋಲ್ ಗಪ್ಪಾಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ, ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಲ್ಲಿ 1201 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದೆ. ಅವುಗಳಲ್ಲಿ 65 ಆಹಾರಗಳು ಸುರಕ್ಷಿತವಾಗಿವೆ. ಉಳಿಕೆ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಅಲ್ಲದೆ ಕಳೆದ ಮೂರು ತಿಂಗಳಲ್ಲಿ ಕೇರಳ ರಾಜ್ಯದಲ್ಲಿ ತಯಾರಿಸಲ್ಪಟ್ಟು ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಖಾರಾ ಮಿಕ್ಸರ್, ಚಿಪ್ಸ್, ಹಲ್ವಾ, ಮುರುಕು, ರಸ್ತೆ, ಡ್ರೈ ಫ್ರೂಟ್ಸ್ಗಳು, ಸಿಹಿ ತಿಂಡಿಗಳು ಸೇರಿದಂತೆ ಹಲವು ವಿಧದ ಆಹಾರ ಪದಾರ್ಥಗಳ 90 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 31 ಮಾದರಿಗಳಲ್ಲಿ ಕೃತಕ ಬಣ್ಣ ಬಳಸಿರುವುದು ಖಚಿತವಾಗಿರುತ್ತದೆ. ಜೊತೆಗೆ ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಕರ ವಿವರ ಇಲ್ಲದೆ ಇರುವುದು, ತಯಾರಿಕಾ ದಿನಾಂಕ ಮುಂಚಿತವಾಗಿ ನಮೂದು ಮಾಡಿರುವುದು, FSSAI ನೋಂದಣಿ ಸಂಖ್ಯೆ ಮುದ್ರಿತವಾಗಿಲ್ಲದಿರುವುದು ಪತ್ತೆಯಾಗಿದೆ.
ಆಹಾರ ಪದಾರ್ಥಗಳ ತಯಾರಿಕಾ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಕೇರಳ ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಸಾರ್ವಜನಿಕರ ಮತ್ತು ಆಹಾರ ಉದ್ದಿಮೆದಾರರ ಸುರಕ್ಷತೆಯ ದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಚಳಿಗಾಲದ ವಿಶೇಷ ಈ "ಕಲ್ಯಾಣ ರಸಂ" ; ಹೀಗೆ ಮಾಡಿದ್ರೆ ತಿನ್ನುವುದಷ್ಟೇ ಅಲ್ಲ, ಕುಡಿಯಲೂಬಹುದು!