ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆ ತುಂಬಾ ಈಗ ಕಾಫಿ ಹೂವಿನ ಘಮ ಘಮ ಸುವಾಸನೆ. ಕಾಫಿ ತೋಟದಲ್ಲಿ ಹಾಲಿನಂತೆ ಅರಳಿನಿಂತಿರುವ ಕಾಫಿ ಹೂಗಳು ದಾರಿಹೋಕರು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. ದಾರಿಯ ಇಕ್ಕೆಲದಲ್ಲಿ ತಮ್ಮ ಸೌಂದರ್ಯವನ್ನು ಅನಾವರಣಗೊಳಿಸುತ್ತಿವೆ. ಇದನ್ನು ನೋಡಿ ಸ್ಥಳೀಯರು ಹಾಗೂ ಪ್ರವಾಸಿಗರು ಮನ ಸೋತಿದ್ದಾರೆ.
ಈ ಕಾಫಿ ಹೂವಿನ ಪರಿಮಳ ಹಾಗೂ ಸುಗಂಧದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೊಬೊಸ್ಟಾ ಹಾಗೂ ಅರೇಬಿಕಾ ಕಾಫಿಯನ್ನು ಬೆಳೆಯಲಾಗುತ್ತದೆ. ಕಳೆದ ಕೆಲ ದಿನಗಳ ಹಿಂದೇ ಸುರಿದ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂಗಳು ಅರಳಿ ನಿಂತಿದ್ದು, ತನ್ನ ಸುವಾಸನೆ ಎಲ್ಲೆಡೆ ಬೀರಲು ಪ್ರಾರಂಭ ಮಾಡಿದೆ. ತಣ್ಣನೆಯ ವಾತಾವರಣದ ಮಧ್ಯೆ ಈ ಹೂಗಳ ಚೆಲುವು ಪ್ರತಿಯೊಬ್ಬರನ್ನು ಮಂತ್ರ ಮುಗ್ಧರನ್ನಾಗಿಸಿದೆ.
ಕಳೆದ ವರ್ಷ ಮಲೆನಾಡು ಭಾಗದಲ್ಲಿ ಒಂದು ಮಟ್ಟಿಗೆ ಧಾರಾಕಾರ ಮಳೆ ಸುರಿದು ಬಹು ಬೇಗನೇ ಕಾಫಿನಾಡು ಹೂಗಳು ಅರಳಿ ನಿಂತಿದ್ದವು. ಈ ವರ್ಷ ಬರಗಾಲ ಆವರಿಸಿ ಸರಿಯಾಗಿ ಮಳೆ ಇನ್ನೂ ಪ್ರಾರಂಭವಾಗಿಲ್ಲ. ಆದರೆ ಕಳೆದ ಒಂದು ವಾರದಿಂದ ಮಲೆನಾಡು ಸುತ್ತಮುತ್ತ ಪ್ರದೇಶದಲ್ಲಿ ಸುರಿದ ಮಳೆಯಿಂದ ಕಾಫಿ ಗಿಡದಲ್ಲಿ ಮೊಗ್ಗಿನ ಜಡೆಯಂತೆ ಹೂಗಳು ಅರಳಿ ನಿಂತಿವೆ.