ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆ ಕೃಷ್ಣಾ ನದಿಗೆ 2 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಪಕಾಲಿ ತೋಟ ಸೇರಿದಂತೆ ಮಾಂಗ ತೋಟದ ಜನರು ತಮ್ಮ ಸಾಮಗ್ರಿ, ಜಾನುವಾರುಗಳ ಜೊತೆಗೆ ಗ್ರಾಮವನ್ನು ತೊರೆಯುತ್ತಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಗಂಟುಮೂಟೆ ಹೊತ್ತು ಹೊರಟಿರುವ ನದಿತೀರದ ಗ್ರಾಮಸ್ಥರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ನಾವು ಜನಪ್ರತಿನಿಧಿಗಳಿಗೆ ನೆನಪಾಗುತ್ತೇವೆ. ಈಗ ನಮ್ಮ ಕಷ್ಟದ ಸ್ಥಿತಿಯಲ್ಲಿ ನಾವು ಅವರಿಗೆ ನೆನಪಾಗುವುದಿಲ್ಲ. ಚುನಾವಣೆಯ ವೇಳೆ ನಮಗೆ ಶಾಶ್ವತ ಸೂರು ಕಲ್ಪಿಸುವ ಭರವಸೆ ನೀಡಿ, ಮತ ಪಡೆದು ನಮಗೆ ದ್ರೋಹವೆಸಗಿದ್ದಾರೆ" ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಆಳಿಹೋದ ಆಳುತ್ತಿರುವ ಸರ್ಕಾರಗಳನ್ನು ಶಪಿಸುತ್ತಾ ಒಲ್ಲದ ಮನಸ್ಸಿನಿಂದ ಊರು ತೊರೆಯುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತೆ ಮಾಡುತ್ತಿವೆ. ಹುಲಗಬಾಳಿ ಗ್ರಾಮದ ಮಾಂಗ್ ತೋಟ ನಡುಗಡ್ಡೆಯಾಗಿದ್ದು, ಇಲ್ಲಿನ ಜನರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಅಪಾಯವನ್ನು ಲೆಕ್ಕಿಸದೇ ಬ್ಯಾರೆಲ್ ಮೂಲಕ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ.