ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗತಿಯಲ್ಲಿ ನಡೆಸುತ್ತಿದ್ದಾರೆ. ಹತ್ಯೆಗೆ ಸಹಕರಿಸಿದ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಶವ ಸಾಗಿಸಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ ಪುನೀತ್ ಸೇರಿ ಐವರನ್ನು ಇಂದು ಬಂಧಿಸಲಾಗಿದೆ. ಈ ಮೂಲಕ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 18ಕ್ಕೆ ಏರಿದೆ.
ಪುನೀತ್, ಹೇಮಂತ್ ಹಾಗೂ ರವಿ ಎಂಬವರನ್ನು ಬಂಧಿಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ, ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪಪದಡಿ ಜಗದೀಶ್ ಹಾಗೂ ಅನುಕುಮಾರ್ ಎಂಬವರನ್ನು ಚಿತ್ರದುರ್ಗದಲ್ಲಿ ಬಂಧಿಸಿ ನಗರಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಕರೆತರುತ್ತಿದ್ದಾರೆ.
ರೇಣುಕಾಸ್ವಾಮಿಯನ್ನು ಹತ್ಯೆ ಮಾಡುತ್ತಾರೆಂದು ಗೊತ್ತಿರಲಿಲ್ಲ. ಮೇಕೆ ತರಲು ಕಾರು ಪಡೆದಿದ್ದರು ಎಂದು ನಿನ್ನೆ ಮಾಧ್ಯಮಗಳ ಮುಂದೆ ಸ್ಕಾರ್ಪಿಯೋ ಮಾಲೀಕ ಪುನೀತ್ ಹೇಳಿಕೆ ನೀಡಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿರುವ ಸಾಕ್ಷ್ಯಾಧಾರ ಲಭ್ಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ದರ್ಶನ್ ಪ್ರಕರಣ: 'ಸ್ಟಾರ್ ವರ್ಶಿಪ್ ಸಿಂಡ್ರೋಮ್ನ ಸೈಡ್ ಎಫೆಕ್ಟ್' - ನಿರ್ದೇಶಕ ಆರ್ಜಿವಿ ಟ್ವೀಟ್ - RGV on Darshan Case
ಶವ ಸಾಗಿಸಿದ ಕಾರಿನಲ್ಲಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ಸಾಕ್ಷ್ಯ ನಾಶಪಡಿಸಿರುವ ಹಿನ್ನೆಲೆಯಲ್ಲಿ ಹೇಮಂತ್ ಹಾಗೂ ಅಪಹರಣ ಮತ್ತು ಹಲ್ಲೆ ಮಾಡುವಾಗ ಸಹಕರಿಸಿದ ಆರೋಪದಡಿ ರವಿ ಎಂಬಾತನನ್ನು ಬಂಧಿಸಲಾಗಿದೆ. ರೇಣುಕಾ ಸ್ವಾಮಿಯನ್ನು ಅಪಹರಿಸಿದ ಆರೋಪದಡಿ ಜಗದೀಶ್ ಹಾಗೂ ಅನುಕುಮಾರ್ ಅವರನ್ನು ಬಂಧಿಸಿ ನಗರಕ್ಕೆ ಕರೆತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹತ್ಯೆಗೂ ಮದ್ಯ ಸೇವನೆ?:ಇನ್ನೂ ಆರ್.ಆರ್.ನಗರದಲ್ಲಿರುವ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಪೊಲೀಸರು ದಾಳಿ ನಡೆಸಿ ಮಹತ್ವದ ಸಾಕ್ಷ್ಯಾಧಾರಗಳನ್ನ ಕಲೆಹಾಕಿದ್ದಾರೆ. ಹತ್ಯೆಗೂ ಮುನ್ನ ಇದೇ ರೆಸ್ಟೋರೆಂಟ್ನಲ್ಲಿ ದರ್ಶನ್ ತಂಡದ ಸದಸ್ಯರು ಮದ್ಯ ಸೇವಿಸಿ ಪಾರ್ಟಿ ಮಾಡಿದ್ದರು ಎನ್ನಲಾದ ಆರೋಪದಡಿ ಇಂದು ಇನ್ಸ್ಪೆಕ್ಟರ್ ಸುಬ್ರಮಣ್ಯ ನೇತೃತ್ವದ ತಂಡ ವಿನಯ್ ನನ್ನ ಕರೆದುಕೊಂಡು ಹೋಗಿ ಸಿಸಿಟಿವಿಯ ಡಿವಿಆರ್ ಸೇರಿದಂತೆ ಅಗತ್ಯ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿದೆ.
ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿದಂತೆ ಈಗಾಗಲೇ 13 ಜನರನ್ನು ಬಂಧಿಸಲಾಗಿದೆ. ಜೊತೆಗೆ ಕೋರ್ಟ್ಗೆ ಹಾಜರುಪಡಿಸಿ ಜೂನ್ 17ರವರೆಗೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೂ ಪಡೆಯಲಾಗಿದೆ. ದರ್ಶನ್ ಸೇರಿ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಪೊಲೀಸರು ಮಹಜರು ಕಾರ್ಯ ನಡೆಸಿದ್ದಾರೆ. ಹಾಗೆಯೇ ಕಳೆದ ರಾತ್ರಿ ಚಿತ್ರದುರ್ಗಕ್ಕೂ ಆರೋಪಿಯನನ್ನು ಕರೆತಂದು ಪೊಲೀಸರು ಮಹಜರು ಮಾಡಿದ್ದಾರೆ.
ಇದನ್ನೂ ಓದಿ:ಕೊಲೆ ಪ್ರಕರಣದ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ ಆರೋಪ: ಸಿಸಿಟಿವಿ ದೃಶ್ಯ ನೀಡುವಂತೆ ವಕೀಲರ ನಿಯೋಗ ಆಗ್ರಹ - RENUKASWAMY MURDER CASE