ಮೈಸೂರು: ಶಿಲ್ಪಕಲಾ ಕ್ಷೇತ್ರದಲ್ಲಿ ಈ ಬಾರಿ ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷ ನೀಡಿದೆ ಎಂದು ಖ್ಯಾತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಹರ್ಷ ವ್ಯಕ್ತಪಡಿಸಿದರು.
'ಈಟಿವಿ ಭಾರತ'ದಜೊತೆ ದೂರವಾಣಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ನಾನು ನೆದರ್ಲ್ಯಾಂಡ್‌ನಲ್ಲಿದ್ದೇನೆ. ನಮ್ಮ ರಾಜ್ಯದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ನೀಡಿತು ಎಂದರು.
ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 69 ಸಾಧಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಶಿಲ್ಪಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ಶಿಲ್ಪ ಕಲಾವಿದ, ಅಯೋಧ್ಯೆಯ ಬಾಲರಾಮನನ್ನು ಕಲ್ಲಿನಲ್ಲಿ ಅರಳಿಸಿದ್ದ ಅರುಣ್ ಯೋಗಿರಾಜ್ ಅವರಿಗೆ ಪ್ರಶಸ್ತಿ ಒಲಿದಿದೆ.
"ಎಲ್ಲರ ಆಶೀರ್ವಾದದಿಂದ ಅಯೋಧ್ಯೆಯ ಬಾಲರಾಮ ಸೇರಿ ದೇಶದ ಹಲವೆಡೆ ಕಲಾ ಕೆತ್ತನೆಯ ಕೆಲಸಗಳನ್ನು ಮಾಡಿದ್ದೇನೆ. ಇದನ್ನು ಪರಿಗಣಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ನನ್ನ ಹೆಸರನ್ನು ಪರಿಗಣಿಸಿರುವುದು ಖುಷಿ ತರಿಸಿತು. ನಾನು ಪ್ರಶಸ್ತಿಗಾಗಿ ಅರ್ಜಿ ಹಾಕಿರಲಿಲ್ಲ. ಅದರೂ ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನ.3ರಂದು ನೆದರ್ಲ್ಯಾಂಡ್ನಲ್ಲಿ ನನ್ನ ನಿಗದಿತ ಕಾರ್ಯಕ್ರಮವಿದ್ದು, ಇದಕ್ಕೂ ಮುನ್ನ ದೇಶಕ್ಕೆ ಅಗಮಿಸಿ ನ.1ರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವೆ" ಎಂದು ಅವರು ಹೇಳಿದರು.
ಮೈಸೂರು ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆಯಾದ ಇತರೆ ಸಾಧಕರು: ಮೈಸೂರು ಜಿಲ್ಲೆಯಿಂದ ನೃತ್ಯ ಕ್ಷೇತ್ರದಲ್ಲಿ ವಿದುಷಿ ಲಲಿತಾ ರಾವ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಮೈಸೂರು ಸತ್ಯ ನಾರಾಯಣ, ರಂಗಭೂಮಿ ಕ್ಷೇತ್ರದಲ್ಲಿ ಡಿ.ರಾಮು ಹಾಗೂ ಜನಾರ್ಧನ್ ಹೆಚ್.ಅಲಿಯಾಸ್ ಜನ್ನಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಅರುಣ್ ಯೋಗಿರಾಜ್, ಹುಲಿಕಲ್ ನಟರಾಜ್ ಸೇರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ