ಬೆಂಗಳೂರು: "ಹಿಂದೂ ದ್ವನಿಯನ್ನು ಹತ್ತಿಕ್ಕಲು ನಮ್ಮ ಮೇಲೆ ಎಫ್ಐಆರ್ ದಾಖಲಿಸಲಾಗಿದೆ" ಎಂದು ಮಂಗಳೂರು ಉತ್ತರ ಬಿಜೆಪಿ ಶಾಸಕ ಭರತ್ ಶೆಟ್ಟಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಂಗಳೂರಿನ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂಬ ಪ್ರಕರಣ ಕುರಿತು ಪ್ರತಿಕ್ರಿಯಿಸಿ, "ನನ್ನ ಮೇಲೆ ದುರುದ್ದೇಶದಿಂದ FIR ಹಾಕಿದ್ದಾರೆ. ಮೊದಲು ಹರೀಶ್ ಪೂಂಜಾ ಮೇಲೆ ಕೇಸ್ ಹಾಕಿದ್ರು. ಈಗ ನನ್ನ ಹಾಗೂ ವೇದವ್ಯಾಸ ಕಾಮತ್ ಮೇಲೆ ಕೇಸ್ ಹಾಕಿದ್ದಾರೆ. ಜೈ ಶ್ರೀರಾಮ್ ಎನ್ನುವವರ ಮೇಲೆ ಕೇಸ್ ಹಾಕುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ರಾಮನನ್ನು ಅವಹೇಳನ ಮಾಡಿದವರನ್ನು ಹಾಗೇ ಬಿಡುತ್ತಿದ್ದಾರೆ. ನಾವು ಇದನ್ನು ಎದುರಿಸುತ್ತೇವೆ. ನಾವು ಇಬ್ಬರು ಶಾಸಕರು ಜಾಮೀನು ಪಡೆಯೋದಿಲ್ಲ. ಈ ಪ್ರಕರಣವನ್ನು ಎದರಿಸುತ್ತೇವೆ. ಸದನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ಸಂಜೆ ಗೃಹ ಸಚಿವರು ಉತ್ತರಿಸಬಹುದು. ನಾವು ಇದನ್ನು ಮತ್ತೆ ಪ್ರಸ್ತಾಪ ಮಾಡುತ್ತೇವೆ" ಎಂದರು.
"ನಾನು ಶಾಲೆಗೆ ಹೋಗೇ ಇರಲಿಲ್ಲ. ಡಿಡಿಪಿಐ ಕಚೇರಿಗೆ ಮಾತ್ರ ಹೋಗಿದ್ದೆ. ಆದರೆ ಗಲಾಟೆ ಮಾಡಿದ್ದೇನೆ ಎಂದು ಕೇಸ್ ಹಾಕಿದ್ದಾರೆ. ಇದು ದುರದ್ದೇಶದಿಂದ ಹಾಕಿರುವ ಕೇಸ್. ನಾನು ಆವತ್ತು ಮಂಗಳೂರಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದೇನೆ. ರಾಮನ ಅವಹೇಳನ ಮಾಡಿದ ಶಿಕ್ಷಕಿಯ ಮೇಲೆ ಕೇಸ್ ಹಾಕಿಲ್ಲ. ಪೋಷಕರೇ ಶಿಕ್ಷಕಿಯ ಮೇಲೆ ದೂರು ನೀಡಿದ್ದಾರೆ. ಆದರೂ ಅವರು ಮೇಲೆ ಕೇಸ್ ಹಾಕಿಲ್ಲ. ಆದರೆ ಡಿಡಿಪಿಐ ಅವರನ್ನು ಮಾತ್ರ ವರ್ಗಾವಣೆ ಮಾಡಿದ್ದಾರೆ. ಅವರು ತನಿಖೆ ಮಾಡಿದರೆ ಸತ್ಯ ಗೊತ್ತಾಗುತ್ತೆ ಎಂದು ಅವರನ್ನು ಎತ್ತಗಂಡಿ ಮಾಡಿದ್ದಾರೆ" ಎಂದು ತಿಳಿಸಿದರು.
ಸರ್ಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ಉಗ್ರ ಹೋರಾಟ:"ಶಿಕ್ಷಕಿಯ ಧಾರ್ಮಿಕ ನಿಂದನೆ ಪ್ರಕರಣದಲ್ಲಿ ಶಾಸಕರ ಮೇಲೆ ಪ್ರಕರಣ ದಾಖಲಿಸಿದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಸರ್ಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು" ಎಂದು ಎಚ್ಚರಿಸಿದ್ದಾರೆ.