ಬೆಂಗಳೂರು: ಕಿರುತೆರೆ ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಬಾಲ ನ್ಯಾಯ ಕಾಯ್ದೆ ಮತ್ತು ಹಿಂದೂ ದತ್ತು ಕಾಯ್ದೆಯ ಉಲ್ಲಂಘನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಗೀತಾ.ಜೆ ಎಂಬವರು ದೂರು ನೀಡಿದ್ದರು.
ಮಾರ್ಚ್ 2ರಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ರಾಯಚೂರು ಮೂಲದ ಹೆಣ್ಣು ಮಗುವೊಂದನ್ನು ಪೋಷಕರ ಸಮ್ಮುಖದಲ್ಲಿ ದತ್ತು ಪಡೆದಿರುವುದಾಗಿ ಸೋನು ಗೌಡ ಹೇಳಿಕೊಂಡಿದ್ದರು. ಆದರೆ ಹಿಂದೂ ದತ್ತು ಕಾಯ್ದೆಯನ್ವಯ ದತ್ತು ಪಡೆಯುವ ವ್ಯಕ್ತಿ ಮತ್ತು ಪಡೆಯಲ್ಪಡುವ ಮಗುವಿನ ನಡುವೆ ಕನಿಷ್ಠ 25 ವರ್ಷ ಅಂತರವಿರಬೇಕು. ದತ್ತು ಪಡೆಯುವ ವ್ಯಕ್ತಿ ತನ್ನ ಅರ್ಹತೆಯ ಕುರಿತು ಕೇಂದ್ರ ಹಾಗೂ ರಾಜ್ಯ ದತ್ತು ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿ ದತ್ತು ಸ್ವೀಕರಿಸಬೇಕು.
ಅಲ್ಲದೇ ಮಗುವಿನ ಪೋಷಕರು ಹಾಗೂ ಮಗುವಿಗೆ ವಿವಿಧ ಸೌಕರ್ಯಗಳನ್ನು ನೀಡಿರುವುದಾಗಿ ಸೋನು ಗೌಡ ಹೇಳಿಕೊಂಡಿರುವುದು, ಮೇಲ್ನೋಟಕ್ಕೆ ಇದು ಮಾರಾಟ ಪ್ರಕ್ರಿಯೆಯಂತೆ ತೋರುತ್ತಿದೆ. ಮಗುವಿನ ಆತ್ಮಾಭಿಮಾನಕ್ಕೆ ಧಕ್ಕೆ ತರುವಂಥದ್ದಾಗಿರುತ್ತದೆ. ಮಗು 1 ಅಥವಾ 2ನೇ ತರಗತಿಯ ಶಿಕ್ಷಣಕ್ಕೆ ಅರ್ಹವಾಗಿರುವಂತೆ ತೋರುತ್ತಿದ್ದು, ಮಾರ್ಚ್ ತಿಂಗಳಿನಲ್ಲಿ ಶಾಲೆಗೆ ಕಳುಹಿಸಿರುವುದಿಲ್ಲ. ಹಾಗಾಗಿ ಸೋನು ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿತ್ತು.