ಬೆಂಗಳೂರು : ಚಿಕಿತ್ಸೆಗೆ ಎಂದು ತೆರಳಿದ್ದ ಮಹಿಳೆಯ ಚಿನ್ನದ ಸರ ಕಳವು ಮಾಡಿದ ಆರೋಪದಡಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜೇಶ್ವರಿ ಎಂಬ ಮಹಿಳೆಯ ಸರ ಕಳುವು ಮಾಡಿರುವ ಆರೋಪದಡಿ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರೆ ರಾಜೇಶ್ವರಿ ಅವರಿಗೆ ಫೆಬ್ರವರಿ 8ರಂದು ತೀವ್ರತರದ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ ತಮ್ಮ ಪತಿಯೊಂದಿಗೆ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ, ಕರ್ತವ್ಯದಲ್ಲಿದ್ದ ವೈದ್ಯರು ತಪಾಸಣೆ ನಡೆಸಿ ಇಸಿಜಿ ಮಾಡಿಸಲು ಸೂಚಿಸಿದ್ದರು. ಇಸಿಜಿ ಮಾಡುವ ಮುನ್ನ ಮಾಂಗಲ್ಯ ಸರ ಬಿಚ್ಚಿ ತಮ್ಮ ಪತಿಯ ಕೈಗೆ ನೀಡಲು ರಾಜೇಶ್ವರಿ ಅವರನ್ನು ತಡೆದಿದ್ದ ನರ್ಸ್, ದಿಂಬಿನ ಕೆಳಗಿರಿಸಲು ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.
ತಪಾಸಣೆ ಮುಗಿದ ನಂತರ ಸರ ಮರೆತಿದ್ದ ರಾಜೇಶ್ವರಿ ಮನೆಗೆ ತೆರಳಿದ್ದಾರೆ. ಬೆಳಗ್ಗೆ ಸ್ನಾನ ಮಾಡುವಾಗ ಮಾಂಗಲ್ಯ ಸರವನ್ನ ರಾತ್ರಿ ಆಸ್ಪತ್ರೆಯಲ್ಲಿ ಬಿಟ್ಟು ಬಂದಿರುವುದು ನೆನಪಾಗಿದೆ. ತಕ್ಷಣ ಆಸ್ಪತ್ರೆಗೆ ಹೋಗಿ ಚಿನ್ನದ ಸರದ ಬಗ್ಗೆ ವಿಚಾರಿಸಿದಾಗ, ಆಸ್ಪತ್ರೆಯವರಿಂದ ಚಿನ್ನದ ಸರ ಇಲ್ಲ ಎಂದು ಬೇಜವಾಬ್ದಾರಿ ಉತ್ತರ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಸ್ಪತ್ರೆಯ ಇಬ್ಬರು ನರ್ಸ್ ಹಾಗೂ ಸ್ವೀಪರ್ ವಿರುದ್ಧ ಅನುಮಾನ ಇರುವುದಾಗಿ ಆರೋಪಿಸಿರುವ ರಾಜೇಶ್ವರಿ, ಗೋವಿಂದರಾಜ ನಗರ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂಟಿ ಮಹಿಳೆಯ ಮಾಂಗಲ್ಯ ಸರ ದೋಚಲು ಯತ್ನ: ಇನ್ನು ಇತ್ತೀಚೆಗೆ ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆಗೊಲ್ಲಹಳ್ಳಿಯ ಹೊರಭಾಗದ ಹೊಲದಲ್ಲಿ ಒಂಟಿಯಾಗಿದ್ದ ಮಹಿಳೆಯ ಮಾಂಗಲ್ಯ ಸರ ದೋಚಲು ಖದೀಮನೋರ್ವ ಯತ್ನಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ, ಇದರಿಂದ ಧೃತಿಗೆಡದ ಮಹಿಳೆ ತನ್ನ ಕೈಯಲ್ಲಿದ್ದ ಸ್ಕ್ರೂ ಡ್ರೈವರ್ನಿಂದ ಸರಗಳ್ಳನ ಮೇಲೆ ದಾಳಿ ಮಾಡಿ, ಆತನನ್ನು ಅಲ್ಲಿಂದ ಓಡಿಸಿರುವ ಘಟನೆ ನಡೆದಿತ್ತು.
ಕಾಮನ ಅಗ್ರಹಾರದ ಶಾರದಮ್ಮ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸರಗಳ್ಳತನ ಯತ್ನ ನಡೆದಿತ್ತು. ಫೆ.6 ರಂದು ಸಂಜೆ ಹೊಲದಲ್ಲಿ ಶಾರದಮ್ಮ ಕೆಲಸ ಮಾಡುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿ ಏಕಾಏಕಿ ಅವರ ಕೊರಳಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದನು. ಆದರೆ ಆ ಮಹಿಳೆ ತನ್ನ ಕೈಯಲ್ಲಿದ್ದ ಸ್ಕ್ರೂ ಡ್ರೈವರ್ನಿಂದ ಸರಗಳ್ಳನ ಮೇಲೆ ಹಲ್ಲೆ ನಡೆಸಿ ಓಡಿಸಿದ್ದರು. ತಕ್ಷಣವೇ ಗ್ರಾಮಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಸರಗಳ್ಳನನ್ನು ಹಿಡಿಯಲು ಕಾಯುತ್ತಿದ್ದ ವೇಳೆ ಆತ ಅಲ್ಲಿಂದ ಎಸ್ಕೇಪ್ ಆಗಿದ್ದನು. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ :ಮಾಂಗಲ್ಯ ಸರ ದರೋಡೆಗೆ ಯತ್ನ: ಕೈಯಲ್ಲಿದ್ದ ಸ್ಕ್ರೂಡ್ರೈವರ್ನಿಂದ ಸರಗಳ್ಳನ ಹಿಮ್ಮೆಟ್ಟಿಸಿದ ಗಟ್ಟಿಗಿತ್ತಿ