ಬೆಂಗಳೂರು:ತಮ್ಮ ಮೇಲೆ ಅತ್ಯಾಚಾರವೆಸಗಿ, ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿರುವ ದೂರಿನ ಅನ್ವಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿನಯ್ ಕುಲಕರ್ಣಿ ಹಾಗೂ ಅವರ ಆಪ್ತ ಸಹಾಯಕ ಅರ್ಜುನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಮತ್ತು ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.
ಮಹಿಳೆಯ ದೂರಿನಲ್ಲಿ ಏನಿದೆ?:''2022ರಲ್ಲಿ ನಾನು ಶಾಸಕ ಕುಲಕರ್ಣಿ ಭೇಟಿ ಮಾಡಿದ್ದು, ಆ ಬಳಿಕ ರೈತರೊಬ್ಬರಿಂದ ಅವರು ನನ್ನ ಫೋನ್ ನಂಬರ್ ಪಡೆದಿದ್ದರು. ನಂತರದಲ್ಲಿ ರಾತ್ರಿ ವೇಳೆಯೂ ನನಗೆ ಕರೆ ಮಾಡಲು ಪ್ರಾರಂಭಿಸಿದ್ದರು. ಆ ಬಳಿಕ, ಬೆತ್ತಲೆಯಾಗಿದ್ದಾಗ ವಿಡಿಯೋ ಕರೆ ಮಾಡುವಂತೆ, ಹೆಬ್ಬಾಳದಲ್ಲಿರುವ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ, ಶಾಸಕರ ಮನೆಗೆ ಬರದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೌಡಿಗಳು ಬೆದರಿಕೆ ಹಾಕಿದರು. ಏಪ್ರಿಲ್‌ನಲ್ಲಿ ಅವರು ನನ್ನನ್ನು ಬೆಳಗಾವಿಗೆ ಕರೆದಿದ್ದರು. ಅಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ'' ಎಂದು ದೂರಿನಲ್ಲಿ ತಿಳಿಸಿದ್ದಾರೆ.
''ಆಗಸ್ಟ್ 24ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ ಕರೆ ಮಾಡಿ, ಹೆಬ್ಬಾಳದ ಮನೆಗೆ ಬರುವಂತೆ ಸೂಚಿಸಿದ್ದರು. ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲೇ ಅತ್ಯಾಚಾರ ಎಸಗಿದರು. ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ನನಗೆ ಆಮಿಷವೊಡ್ಡಿದ್ದರು. ಅಲ್ಲದೆ, ಅಕ್ಟೋಬರ್ 2ರಂದು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಯಾರಿಗೂ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ.'' ಎಂದು ಮಹಿಳೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಸಂಜಯನಗರ ಠಾಣೆ ಪೊಲೀಸರು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ವಿನಯ್ ಕುಲಕರ್ಣಿ ನೀಡಿದ ದೂರಿನಲ್ಲಿ ಏನಿದೆ?:ಮತ್ತೊಂದೆಡೆ, ಮಹಿಳೆ ದೂರು ನೀಡುವ ಒಂದು ದಿನ ಮುನ್ನವೇ ಶಾಸಕ ವಿನಯ್ ಕುಲಕರ್ಣಿ ಬ್ಲ್ಯಾಕ್‌ಮೇಲ್ ಯತ್ನ ಆರೋಪಿಸಿ ದೂರು ನೀಡಿದ್ದರು. ''ತಮ್ಮ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದು, ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ'' ಎಂದು ಸಂಜಯನಗರ ಠಾಣೆಗೆ ವಿನಯ್ ಕುಲಕರ್ಣಿ ದೂರು ನೀಡಿದ್ದಾರೆ.