ಬೆಂಗಳೂರು:ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದ ಆರೋಪದಡಿ ಬಾಂಗ್ಲಾದೇಶದ ಪತ್ರಕರ್ತ ಸೇರಿದಂತೆ ಇಬ್ಬರ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ಕೆಪಿಸಿಸಿ ಕಾನೂನು ಘಟಕ ನೀಡಿರುವ ದೂರಿನ ಅನ್ವಯ ಬಾಂಗ್ಲಾದೇಶದ ಪತ್ರಕರ್ತ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಹಾಗೂ ಪೋಸ್ಟ್ ಹಂಚಿಕೊಂಡಿದ್ದ ಅದಿತಿ ಘೋಷ್ ಎಂಬವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
'ಆಗಸ್ಟ್ 23ರಂದು ತಮ್ಮ 'X' ಖಾತೆಯಾದ @salaha shoaibನಲ್ಲಿ ಪೋಸ್ಟ್ ಮಾಡಿರುವ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ, ಸೋನಿಯಾ ಗಾಂಧಿಯವರ ಅಂತರ್‌ಧರ್ಮೀಯ ವಿವಾಹ, ಭಾರತೀಯ ಪೌರತ್ವ ಹಾಗೂ ಅವರ ಧಾರ್ಮಿಕ ಸ್ವಾತಂತ್ರ್ಯವನ್ನ ಉಲ್ಲೇಖಿಸುವ ಮೂಲಕ ಅವರನ್ನು ಐಎಸ್ಐ ಏಜೆಂಟ್ ಎಂಬ ರೀತಿ ಬಿಂಬಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ವಿದೇಶಿ ಸ್ನೇಹಿತರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ' ಎಂದು ದೂರಿನಲ್ಲಿ ತಿಳಿಸಲಾಗಿದೆ.